ನವ ದೆಹಲಿ: ತಮ್ಮ ಆನ್ಲೈನ್ ಪೋರ್ಟಲ್ ಮೂಲಕ ಆ್ಯಸಿಡ್ ಮಾರಾಟಕ್ಕೆ ಅವಕಾಶ ನೀಡಿದ ಆರೋಪದ ಮೇಲೆ ದೆಹಲಿ ಮಹಿಳಾ ಆಯೋಗವು ಎರಡು ಇ-ಕಾಮರ್ಸ್ ಕಂಪನಿಗಳಿಗೆ ಗುರುವಾರ ನೋಟಿಸ್ ಜಾರಿ ಮಾಡಿದೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಆ್ಯಸಿಡ್ ದಾಳಿ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿಯು ಇ-ಕಾಮರ್ಸ್ ಪೋರ್ಟಲ್ ಮೂಲಕ ಆ್ಯಸಿಡ್ ಸಂಗ್ರಹಿಸಿದ್ದನ್ನು ಪತ್ತೆ ಹಚ್ಚಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ, ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ಗಳಿಗೆ ನೋಟಿಸ್ ಜಾರಿ ಮಾಡಿದೆ.
ಆನ್‌ಲೈನ್‌ನಲ್ಲಿ ಆ್ಯಸಿಡ್ ಸುಲಭವಾಗಿ ಲಭ್ಯವಾಗುವುದನ್ನು ಗಂಭೀರ ಕಾಳಜಿಯ ವಿಷಯ ಎಂದು ಕರೆದ ಮಹಿಳಾ ಆಯೋಗ, ಡಿಸೆಂಬರ್ 20 ರೊಳಗೆ ಎರಡು ಸಂಸ್ಥೆಗಳಿಂದ ವಿವರವಾದ ಕ್ರಮ ತೆಗೆದುಕೊಂಡ ವರದಿಯನ್ನು ಕೇಳಿದೆ. ಆನ್‌ಲೈನ್‌ನಲ್ಲಿ ಆ್ಯಸಿಡ್ ಮಾರಾಟ ಮಾಡಲು ಪ್ಲಾಟ್‌ಫಾರ್ಮ್‌ಗಳು ಪಡೆದ ಪರವಾನಗಿಯ ಪ್ರತಿಯನ್ನೂ ಒಪ್ಪಿಸುವಂತೆ ಸೂಚಿಸಿದೆ.
ಪಶ್ಚಿಮ ದೆಹಲಿಯ ಮೋಹನ್ ಗಾರ್ಡನ್ ಪ್ರದೇಶದಲ್ಲಿ ಶಾಲೆಗೆ ಹೋಗುತ್ತಿದ್ದ 17 ವರ್ಷದ ಬಾಲಕಿಯ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಬುಧವಾರ ಆ್ಯಸಿಡ್ ದಾಳಿ ನಡೆಸಿದ್ದರು. ಬಾಲಕಿ ಸಫ್ದರ್‌ಜಂಗ್ ಆಸ್ಪತ್ರೆಯ ಐಸಿಯುನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.
ಇದನ್ನೂ ಓದಿ: ದೆಹಲಿಯಲ್ಲಿ ಶಾಲಾ ಬಾಲಕಿ ಮೇಲೆ ಆ್ಯಸಿಡ್ ದಾಳಿ: ಓರ್ವನ ಬಂಧನ