ರಾಂಚಿ (ಜಾರ್ಖಂಡ್): ಕಾಡಾನೆ ದಾಳಿ ಹಿನ್ನೆಲೆಯಲ್ಲಿ ಜಾರ್ಖಂಡ್ನ ಇಟ್ಕಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜಾರ್ಖಂಡ್ನ ಐದು ಜಿಲ್ಲೆಗಳಲ್ಲಿ ಆನೆಗಳು ಅವಾಂತರ ಸೃಷ್ಟಿಸಿದ್ದು, ಇದುವರೆಗೆ ಹಲವು ಜನರನ್ನು ಬಲಿ ಪಡೆದಿದೆ. ಆನೆ ದಾಳಿಯಿಂದಾಗಿ ಇದುವರೆಗೆ ಸುಮಾರು 14 ಜನ ಸಾವನ್ನಪ್ಪಿದ್ದಾರೆ ಎಂದು ಪಿಸಿಸಿಎಫ್ ಶಶಿಕರ್ ಸಾಮಂತ್ ಮಾಹಿತಿ ನೀಡಿದ್ದಾರೆ. ಈ ಪ್ರಕಾರ ಹಜಾರಿಬಾಗ್‌ನಲ್ಲಿ ಒಂದೇ ಆನೆ ಮೂವರನ್ನು ತುಳಿದು ಸಾಯಿಸಿದೆ. ಇಲ್ಲಿಂದ ಆನೆಯನ್ನು ಚತರಾದ ಕಾಡಿಗೆ ಓಡಿಸಲಾಗಿದ್ದು, ಅಲ್ಲಿಯೂ ಒಬ್ಬ ವ್ಯಕ್ತಿಯ ಮೇಲೆ ಮದಗಜ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ಅಷ್ಟೇ ಅಲ್ಲದೆ ಲತೇಹರ್‌ನಲ್ಲಿ ಒಬ್ಬ ವ್ಯಕ್ತಿಯ ಮೇಲೆ ಆನೆ ದಾಳಿ ನಡೆಸಿ ಬಲಿ ಪಡೆದಿದೆ. ಲತೇಹರ್ ನಂತರ ಲೋಹರ್ದಗಾ ಜಿಲ್ಲೆಯನ್ನು ಪ್ರವೇಶಿಸಿದ ಆನೆ 48 ಗಂಟೆಗಳಲ್ಲಿ ಸುಮಾರು ಐದು ಜನರನ್ನು ಬಲಿ ಪಡೆದುಕೊಂಡಿದೆ. ಸದ್ಯ ಆನೆಯು ಲೋಹರ್ದಗಾದಿಂದ ರಾಂಚಿಯ ಇಟ್ಕಿ ಪೊಲೀಸ್ ಠಾಣೆ ವ್ಯಾಪ್ತಿಯನ್ನು ಪ್ರವೇಶಿಸಿದ್ದು, ಇಲ್ಲಿನ ವಿವಿಧ ಗ್ರಾಮಗಳಿಗೆ ನುಗ್ಗಿರುವ ಮದ ಏರಿರುವ ಆನೆ, ಇದುವರೆಗೆ ನಾಲ್ವರನ್ನ ಕೊಂದು ಹಾಕಿದೆ. ಇದರಲ್ಲಿ ಮೂವರು ಪುರುಷರು ಮತ್ತು ಒಬ್ಬ ಮಹಿಳೆ ಸೇರಿದ್ದಾರೆ. ಹಜಾರಿಬಾಗ್, ಚತರಾ, ಲತೇಹರ್, ಲೋಹರ್ದಗಾ ಮತ್ತು ರಾಂಚಿಯಲ್ಲಿ ಇದುವರೆಗೆ 14 ಜನರನ್ನು ಆನೆ ಬಲಿ ಪಡೆದಿದೆ. ಇಲ್ಲಿನ ಸುತ್ತಮುತ್ತಲ ಪ್ರದೇಶಗಳ ಜನರಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಆನೆ ಕಾಟದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ: ಆನೆ ದಾಳಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಮನವಿಯ ಮೇರೆಗೆ ಇಟ್ಕಿ ಪ್ರದೇಶದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ರಾಂಚಿಯ ಎಸ್‌ಡಿಒ ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೇ ಸ್ಥಳದಲ್ಲಿ ಸೇರುವಂತಿಲ್ಲ. ಜನ ಜಮಾಯಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.
ಮುಂದುವರಿದ ಆನೆ ಪತ್ತೆ ಕಾರ್ಯ: ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಸಿಸಿಎಫ್ ಶಶಿಕರ್ ಸಾಮಂತ ಅವರು, ಆನೆಯನ್ನು ಪತ್ತೆ ಹೆಚ್ಚುವ ಕಾರ್ಯ ಮಾಡಲಾಗುತ್ತಿದೆ. ಸಾಮಾನ್ಯವಾಗಿ ವಿವಿಧ ಕಾರಣಗಳಿಗೆ ಆನೆಗಳು ಈ ರೀತಿಯ ದಾಳಿ ನಡೆಸುತ್ತವೆ. ತನ್ನ ಹಿಂಡಿನಿಂದ ಬೇರ್ಪಟ್ಟಾಗ ಅಥವಾ ಅಮಲೇರಿದ ಸಂದರ್ಭಗಳಲ್ಲಿ ಆನೆಗಳು ಈ ರೀತಿಯ ದಾಳಿಗಳನ್ನು ಮಾಡುತ್ತದೆ. ಆದರೆ, ಅನೇಕ ಬಾರಿ ಜನರು ಆನೆಯನ್ನು ನೋಡಿದಾಗ ಕಲ್ಲು ಎಸೆಯಲು ಪ್ರಾರಂಭಿಸುತ್ತಾರೆ. ಇದರಿಂದ ಆನೆಗೆ ಕೋಪ ಬರುತ್ತದೆ. ಆಗ ಜನರ ಮೇಲೆ ದಾಳಿ ನಡೆಸುವ ಸಾಧ್ಯತೆಗಳು ಹೆಚ್ಚು ಎಂದು ಅವರು ತಿಳಿಸಿದ್ದಾರೆ. ಇಲ್ಲಿನ ಜನರ ಮೇಲೆ ದಾಳಿ ನಡೆಸಿರುವ ಆನೆಯು ಯಾವ ಸ್ಥಿತಿಯಲ್ಲಿ ಇದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಆನೆಯನ್ನು ಅದರ ಹಿಂಡಿನೊಂದಿಗೆ ಸೇರಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಸಾಮಂತ್ ತಿಳಿಸಿದರು.
ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ : ಗ್ರಾಮದ ಸುತ್ತಮುತ್ತ ಆನೆಗಳು ಕಾಣಿಸಿಕೊಂಡರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಯಾವುದೇ ಸಂದರ್ಭದಲ್ಲೂ ಆನೆಯ ಹತ್ತಿರ ಹೋಗಬಾರದು. ಆನೆಗಳು ಸಕ್ರಿಯವಾಗಿರುವ ಪ್ರದೇಶಗಳಲ್ಲಿನ ಸ್ಥಳಗಳಲ್ಲಿ ರಾತ್ರಿ ಮಲಗಬಾರದು. ಕೊಟ್ಟಿಗೆಯಲ್ಲಿ ಅಥವಾ ಮನೆಯಲ್ಲಿ ಇಟ್ಟಿರುವ ಧಾನ್ಯವನ್ನು ಆನೆಗಳು ತಿನ್ನಲು ಪ್ರಾರಂಭಿಸಿದರೆ, ಅದಕ್ಕೆ ಅಡ್ಡಿಪಡಿಸಬಾರದು. ನಷ್ಟದ ಬಗ್ಗೆ ಅಧಿಕಾರಿಗೆ ತಿಳಿಸಿ, ನಷ್ಟದ ಆಧಾರದ ಮೇಲೆ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಪಾಲಕ್ಕಾಡ್ ದೇವಸ್ಥಾನದ ಮೆರವಣಿಗೆಯಲ್ಲಿ ಮದವೇರಿದ ಆನೆ ದಾಳಿ.. ಅದೃಷ್ಟವಶಾತ್ ಪಾರಾದ ಮಾವುತ