ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತ ಇಂದಿನಿಂದ ಶುರುವಾಗಲಿದೆ. ಹಣಕಾಸು ಮಸೂದೆಯನ್ನು ಅಂಗೀಕರಿಸುವುದಕ್ಕೆ ಸರ್ಕಾರ ಆದ್ಯತೆ ನೀಡಿದೆ. ಇದೇ ವೇಳೆ ಪ್ರತಿಪಕ್ಷಗಳು, ಕೇಂದ್ರೀಯ ಸಂಸ್ಥೆಗಳ ಕ್ರಮ ಮತ್ತು ಅದಾನಿ ವಿರುದ್ಧದ ಆರೋಪಗಳಂತಹ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ.
ಜ್ವಲಂತ ಸಮಸ್ಯೆ ಕುರಿತು ಚರ್ಚೆ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮಾತನಾಡಿ, ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವಲ್ಲಿ ರಚನಾತ್ಮಕ ಪಾತ್ರ ವಹಿಸಲು ಬಯಸುತ್ತೇವೆ ಎಂದು ಹೇಳಿದ್ದಾರೆ. ರಾಷ್ಟ್ರ ಎದುರಿಸುತ್ತಿರುವ ಪ್ರತಿಯೊಂದು ಜ್ವಲಂತ ಸಮಸ್ಯೆಯ ಕುರಿತು ಸದನದಲ್ಲಿ ಚರ್ಚಿಸುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಭಾನುವಾರ ನಡೆದ ಸಭೆಯಲ್ಲಿ ರಾಜ್ಯಸಭಾ ಅಧ್ಯಕ್ಷರೂ ಆಗಿರುವ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸದನದಲ್ಲಿ ಅಡೆತಡೆಗಳನ್ನು ತಡೆಯುವ ಮಾರ್ಗಗಳ ಕುರಿತು ವಿವಿಧ ರಾಜಕೀಯ ಪಕ್ಷಗಳ ನಾಯಕರ ಅಭಿಪ್ರಾಯ ಕೇಳಿದ್ದಾರೆ. ಬಿಜೆಪಿಯೇತರ ಸರ್ಕಾರಗಳ ವಿರುದ್ಧ ಕೇಂದ್ರೀಯ ಸಂಸ್ಥೆಗಳ ದುರುಪಯೋಗ ಮತ್ತು ಸಂಸದೀಯ ಸಮಿತಿಗಳಲ್ಲಿ ಧನಕರ್ ಅವರು ವೈಯಕ್ತಿಕ ಸಿಬ್ಬಂದಿ ನೇಮಿಸಿರುವ ಕ್ರಮಕ್ಕೆ ಇದೇ ಸಂದರ್ಭದಲ್ಲಿ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಸಂಸತ್ತಿನ ಉಭಯ ಸದನಗಳಿಗೆ ತಮ್ಮ ಕಾರ್ಯತಂತ್ರ ರೂಪಿಸಲು ವಿರೋಧ ಪಕ್ಷಗಳು ಇಂದು ಬೆಳಗ್ಗೆ ಸಭೆ ಸೇರಲಿವೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಚೇತಕ ಮಾಣಿಕಂ ಟ್ಯಾಗೋರ್ ಮಾತನಾಡಿ, "ನಾವು ಜನರ ಸಮಸ್ಯೆಗಳಾದ ಬೆಲೆ ಏರಿಕೆ, ಎಲ್‌ಪಿಜಿ ದರ ಹೆಚ್ಚಳ, ಅದಾನಿ, ಏಜೆನ್ಸಿಗಳ ದುರುಪಯೋಗ, ರೈತರ ಸಮಸ್ಯೆ, ರಾಜ್ಯಪಾಲರ ಹಸ್ತಕ್ಷೇಪವನ್ನು ಸದನದಲ್ಲಿ ಚರ್ಚೆ ನಡೆಸುತ್ತೇವೆ. ನಾವು ಎಲ್ಲಾ ಸಮಾನ ಮನಸ್ಕ ಪಕ್ಷಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಹಾಗಾಗಿ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಇರಬೇಕೆಂದು ಬಯಸುತ್ತೇವೆ'' ಎಂದರು.
"ವಿರೋಧ ಪಕ್ಷಗಳು ತಮ್ಮ ನಾಯಕರ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಇತ್ತೀಚಿನ ದಾಳಿಗಳ ವಿಷಯವನ್ನು ಧ್ವನಿ ಎತ್ತುವ ಸಾಧ್ಯತೆ ಇದೆ. ಅವರಲ್ಲಿ ಕೆಲವರನ್ನು ವಿವಿಧ ಪ್ರಕರಣಗಳಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಮತ್ತು ಬಂಧಿಸಲಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಿಜೆಪಿಯ ಪ್ರತಿಸ್ಪರ್ಧಿ ಪಕ್ಷಗಳ ನಾಯಕರನ್ನು ಗುರಿಯಾಗಿಸಲು ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ" ಎಂದು ಅವರು ಆರೋಪಿಸಿದ್ದಾರೆ.
ಹಣಕಾಸು ಮಸೂದೆಗೆ ಆದ್ಯತೆ: ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್‌ರಾಮ್ ಮೇಘವಾಲ್ ಮಾತನಾಡಿ, "ಹಣಕಾಸು ಮಸೂದೆಯನ್ನು ಅಂಗೀಕರಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ರೈಲ್ವೆ, ಪಂಚಾಯತ್ ರಾಜ್, ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಆರೋಗ್ಯ ಸೇರಿದಂತೆ ಸಚಿವಾಲಯಗಳ ಅನುದಾನದ ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಗುವುದು" ಎಂದರು.
"ಅನುದಾನಕ್ಕಾಗಿ ಬಾಕಿ ಉಳಿದಿರುವ ಎಲ್ಲಾ ಬೇಡಿಕೆಗಳು, ಚರ್ಚೆಯಾಗಲಿ ಅಥವಾ ಇಲ್ಲದಿರಲಿ. ಮತಕ್ಕೆ ಹಾಕಲಾಗುತ್ತದೆ ಮತ್ತು ಅಂಗೀಕರಿಸಲಾಗುತ್ತದೆ. ಹಣಕಾಸು ಮಸೂದೆಯನ್ನು ಅಂಗೀಕರಿಸುವುದು ಸರ್ಕಾರದ ಮೊದಲ ಜವಾಬ್ದಾರಿ. ನಂತರ ನಾವು ಪ್ರತಿಪಕ್ಷಗಳ ಬೇಡಿಕೆಗಳ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತೇವೆ" ಸ್ಪೀಕರ್ ಓಂ ಬಿರ್ಲಾ ಹೇಳಿದರು.
ಜ.31 ರಂದು ಪ್ರಾರಂಭವಾದ ಬಜೆಟ್ ಅಧಿವೇಶನ ಏಪ್ರಿಲ್ 6 ರಂದು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಒಂದು ತಿಂಗಳ ಅವಧಿಯ ವಿರಾಮದ ನಂತರ ಸಂಸತ್ತು ಸಭೆ ಸೇರುತ್ತಿದೆ. ಇದು ವಿವಿಧ ಸಚಿವಾಲಯಗಳಿಗೆ ಕೇಂದ್ರ ಬಜೆಟ್‌ನಲ್ಲಿ ಮಾಡಿದ ಹಂಚಿಕೆಗಳನ್ನು ಪರಿಶೀಲಿಸಲು ವಿವಿಧ ಸಂಸದೀಯ ಸಮಿತಿಗಳಿಗೆ ಅವಕಾಶ ನೀಡುತ್ತದೆ.
ಇಂದು (ಸೋಮವಾರ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನುದಾನಕ್ಕಾಗಿ ಪೂರಕ ಬೇಡಿಕೆಗಳನ್ನು ಮಂಡಿಸಲಿದ್ದಾರೆ. ಇದು 2022-23ರ ಎರಡನೇ ಹಂತ. ಅವರು ಲೋಕಸಭೆಯಲ್ಲಿ 2023-24 ನೇ ಸಾಲಿನ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಬಜೆಟ್ ಅನ್ನು ಸಹ ಮಂಡಿಸಲಿದ್ದಾರೆ. ಯುಟಿಯು ಪ್ರದೇಶ ಪ್ರಸ್ತುತ ಕೇಂದ್ರದ ಆಡಳಿತದಲ್ಲಿದೆ. ಲೋಕಸಭೆಯ ಆದೇಶ ಪತ್ರಿಕೆಯಲ್ಲಿ ಈ ಎರಡು ಅಂಶಗಳನ್ನು ಪಟ್ಟಿ ಮಾಡಲಾಗಿದೆ.
ಇದನ್ನೂ ಓದಿ: ಅದಾನಿ ಸೇರಿ 447 ಕಂಪನಿಗಳಿಂದ ಪಾವತಿಯಾಗದ ಸರ್ಕಾರಿ ತೆರಿಗೆ..!