ಚಂಡೀಗಢ : ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್‌ಪಾಲ್ ಸಿಂಗ್ ನಾಪತ್ತೆಯಾಗಿದ್ದು, ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಭಾನುವಾರ ಪಂಜಾಬ್‌ನಾದ್ಯಂತ ಪರೇಡ್ ಮತ್ತು ಶೋಧ ನಡೆಸಿದ್ದು, ಈವರೆಗೆ ಈತನ 34 ಬೆಂಬಲಿಗರನ್ನು ಬಂಧಿಸಲಾಗಿದೆ. ಇದರ ಹೊರತಾಗಿ ಆರೋಪಿಯ ಚಿಕ್ಕಪ್ಪ ಮತ್ತು ಕಾರು ಚಾಲಕ ಇದೀಗ ಪೊಲೀಸರಿಗೆ ಶರಣಾಗಿದ್ದಾರೆ.
34 ಬೆಂಬಲಿಗರಲ್ಲಿ ನಾಲ್ವರನ್ನು ಅಸ್ಸಾಂನ ದಿಬ್ರುಗಢ ಜೈಲಿಗೆ ಸ್ಥಳಾಂತರಿಸಲಾಗಿದೆ. ದಲ್ಜಿತ್ ಸಿಂಗ್ ಕಲ್ಸಿ, ಭಗವಂತ್ ಸಿಂಗ್, ಗುರ್ಮೀತ್ ಸಿಂಗ್ ಮತ್ತು 'ಪ್ರಧಾನಮಂತ್ರಿ' ಬಜೆಕಾ ಎಂಬವರನ್ನು ಸ್ಥಳಾಂತರಿಸಲಾಗಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಅಮೃತ್ ಪಾಲ್ ಸಿಂಗ್‌ಗಾಗಿ ಸಲ್ಲಿಕೆಯಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎನ್.ಎಸ್.ಶೇಖಾವತ್, ಘಟನೆ ಸಂಬಂಧ ಮಂಗಳವಾರ ಪ್ರತಿಕ್ರಿಯೆ ನೀಡುವಂತೆ ಪಂಜಾಬ್ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ಅಮೃತ್‌ಪಾಲ್ ಸಿಂಗ್‌ಗಾಗಿ ಶನಿವಾರ ಜಲಂಧರ್ ಜಿಲ್ಲೆಯಲ್ಲಿ ಕಾರ್ಯಾಚರಣೆ ಆರಂಭಗೊಂಡಿತ್ತು. ಈತನ ನೇತೃತ್ವದ "ವಾರಿಸ್ ಪಂಜಾಬ್ ದೇ" ಸಂಘಟನೆ ಮತ್ತು ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚಂಡೀಗಢದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪಂಜಾಬ್‌ನ ವಿವಿಧ ಭಾಗಗಳಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಯಲ್ಲಿದೆ.
ಶನಿವಾರ ಅಮೃತ್ಪಾಲ್ನ ಕಾರು ನಾಕೋಡರ್ನಲ್ಲಿ ನಿಂತಿರುವುದನ್ನು ಪತ್ತೆ ಹಚ್ಚಿದ್ದ ಪೊಲೀಸರು, ಮತ್ತೊಂದು ವಾಹನವನ್ನು ಜಲಂಧರ್ ಜಿಲ್ಲೆಯ ಸಲೇಮಾ ಗ್ರಾಮದಲ್ಲಿ ಪತ್ತೆ ಮಾಡಿದ್ದಾರೆ. ಈ ವಾಹನದಲ್ಲಿದ್ದ ಬಂದೂಕು, ಕತ್ತಿ , ಮದ್ದುಗುಂಡುಗಳು ಸೇರಿದಂತೆ ಮತ್ತಿತರ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಅಮೃತ್‌ಪಾಲ್ ಬೆಂಬಲಿಗರು ಅಮೃತಸರದ ಅಜ್ನಾಲ ಪೊಲೀಸ್ ಠಾಣೆಗೆ ನುಗ್ಗಿ ಹಿಂಸಾಚಾರ ನಡೆಸಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಒಟ್ಟು ಆರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಅಜ್ನಾಲ ಹಿಂಸಾಚಾರದ ಬಳಿಕ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದರು. ಕೆಲವು ದಿನಗಳ ಹಿಂದೆ, ಅಮೃತ್‌ಪಾಲ್ ಸಿಂಗ್ ಅಮಿತ್ ಶಾ ಅವರಿಗೂ ಬೆದರಿಕೆ ಹಾಕಿದ್ದನು.
ಕಾರ್ಯಾಚರಣೆಗೂ ಮುನ್ನ ಬೋಪರೈ ಕಾಲನ್ನಲ್ಲಿ ಧರಣಿ ನಡೆಸುತ್ತಿದ್ದ ಅಮೃತ್ ಪಾಲ್ನ 21 ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಶನಿವಾರ ಒಟ್ಟು 78 ಮಂದಿ ಮತ್ತು ಭಾನುವಾರ ಒಟ್ಟು 34 ಮಂದಿಯನ್ನು ಬಂಧಿಸಲಾಗಿದೆ. ಇವರಿಂದ ಕೆಲವು ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜ್ಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಫಿರೋಜ್‌ಪುರ್, ಬಟಿಂಡಾ, ರೂಪನಗರ, ಫರೀದ್‌ಕೋಟ್, ಬಟಾಲಾ, ಫಜಿಲ್ಕಾ, ಹೋಶಿಯಾರ್‌ಪುರ, ಗುರುದಾಸ್‌ಪುರ್, ಮೋಗಾ ಮತ್ತು ಜಲಂಧರ್ ಸೇರಿದಂತೆ ಹಲವು ಸ್ಥಳಗಳಲ್ಲಿ ಭದ್ರತಾ ಪಡೆಗಳು ಪರೇಡ್ ನಡೆಸಿವೆ. ಪಂಜಾಬ್ ಸರ್ಕಾರವು ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಗಳ ಸ್ಥಗಿತವನ್ನು ಸೋಮವಾರ ಮಧ್ಯಾಹ್ನದವರೆಗೆ ವಿಸ್ತರಿಸಿದೆ. ಆದರೆ ಬ್ಯಾಂಕಿಂಗ್ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.
ಅಮೃತ್ಪಾಲ್ನ ಗ್ರಾಮವಾದ ಅಮೃತಸರದ ಜಲ್ಲುಪುರ್ ಖೇರಾದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಮೃತ್ ಪಾಲ್ ತಂದೆ ತಾರ್ಸೆಮ್ ಸಿಂಗ್ ಅವರು ತಮ್ಮ ಮಗನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಆತನಿಗೆ ಜೀವ ಬೆದರಿಕೆ ಇದೆ. ನಿನ್ನೆಯಿಂದ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಪೊಲೀಸರು ಬಂಧಿಸಿರಬಹುದು ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಮಹಾನಿರೀಕ್ಷಕ ಸುಖಚೈನ್ ಸಿಂಗ್ ಗಿಲ್, ಅಮೃತ್‌ಪಾಲ್ ಸಿಂಗ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ಸಂಬಂಧ ಪಂಜಾಬ್ ಪೊಲೀಸರು ಕಾನೂನಿನ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದ್ದಾರೆ.
ಪೊಲೀಸರು ಅಮೃತ್‌ಪಾಲ್ ಸಿಂಗ್ ಮತ್ತು ಅವರ ಬೆಂಬಲಿಗರ ವಿರುದ್ಧ ಹಲ್ಲೆ ಮತ್ತು ಜಲಂಧರ್ ಗ್ರಾಮದಲ್ಲಿ ಪತ್ತೆಯಾದ ವಾಹನದಲ್ಲಿ ಬಂದೂಕು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅಮೃತ್ಪಾಲ್ನ ಏಳು ಸಹಚರರನ್ನು ಬಂಧಿಸಿದ ನಂತರ ಶಸ್ತ್ರಾಸ್ತ್ರ ಕಾಯ್ದೆಯಡಿ ಶನಿವಾರ ರಾತ್ರಿ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಮೃತಸರ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸತೀಂದರ್ ಸಿಂಗ್ ಹೇಳಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ವೈಫಲ್ಯ ಕಂಡಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿವೆ.
ಇದನ್ನೂ ಓದಿ: ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತ್‌ಪಾಲ್‌ಗೆ ತೀವ್ರ ಶೋಧ: ಸಲಹೆಗಾರನ ಬಂಧನ, ಬಸ್, ಇಂಟರ್ನೆಟ್ ಬಂದ್