ಕೋಯಿಕ್ಕೋಡ್ (ಕೇರಳ) : ಶಸ್ತ್ರಚಿಕಿತ್ಸೆ ವೇಳೆ ಹೊಟ್ಟೆಯಲ್ಲೇ ಎರಡು ಕತ್ತರಿ ಬಿಟ್ಟ ವೈದ್ಯರು ಮತ್ತು ಶುಶ್ರೂಷಕರ ವಿರುದ್ಧ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಎದುರು ಸತತ 104 ದಿನಗಳಿಂದ ಹರ್ಷಿನಾ ಅವರು ನಡೆಸುತ್ತಿದ್ದ ಪ್ರತಿಭಟನೆ ಶನಿವಾರ ಅಂತ್ಯಗೊಂಡಿದೆ. ಆರೋಪಿಗಳ ವಿರುದ್ಧ ಹೊಸದಾಗಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಬಳಿಕ ಹರ್ಷಿನಾ ಅವರು ಧರಣಿ ಕೈಬಿಟ್ಟಿದ್ದಾರೆ.
2017 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಯಿಕ್ಕೋಡ್ ಆಸ್ಪತ್ರೆಯ ಇಬ್ಬರು ವೈದ್ಯರು ಮತ್ತು ಇಬ್ಬರು ದಾದಿಯರ ವಿರುದ್ಧ ಪೊಲೀಸರು ಕುನ್ನಮಂಗಲಂ ನ್ಯಾಯಾಲಯದಲ್ಲಿ ಪರಿಷ್ಕೃತ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಧರಣಿ ಅಂತ್ಯಗೊಳಿಸಿದ ಬಳಿಕ ಈಟಿವಿ ಭಾರತದೊಂಡಿಗೆ ಮಾತನಾಡಿದ ಸಂತ್ರಸ್ತೆ ಹರ್ಷಿನಾ ಅವರು, ತಮ್ಮ ಪ್ರತಿಭಟನೆ ಸಂಪೂರ್ಣ ಯಶಸ್ವಿಯಾಗಿದೆ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ. ಪೊಲೀಸರು ಪ್ರಕರಣವನ್ನು ಮರು ವಿಚಾರಣೆ ನಡೆಸಿ ಹೊಸದಾಗಿ ಆರೋಪಪಟ್ಟಿ ಸಲ್ಲಿಸಿದ್ದರಿಂದ ಪ್ರತಿಭಟನೆ ನಿಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು.
ಪ್ರಕರಣವೇನು?: 2017 ರಲ್ಲಿ ಕೋಯಿಕ್ಕೋಡ್ ಆಸ್ಪತ್ರೆಯಲ್ಲಿ ಹರ್ಷಿನಾ ಅವರು ಹೆರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ 2 ಕತ್ತರಿಗಳನ್ನು ಹೊಟ್ಟೆಯಲ್ಲೇ ಬಿಡಲಾಗಿತ್ತು. ಹೀಗಾಗಿ ಹರ್ಷಿನಾ ಅವರಿಗೆ ಹೊಟ್ಟೆಯಲ್ಲಿ ಪದೇ ಪದೆ ನೋವು ಕಾಣಿಸಿಕೊಳ್ಳುತ್ತಿತ್ತು. ನಂತರ ತಪಾಸಿಸಿದ ವೈದ್ಯರು ಹೆರಿಗೆ ಕಾರಣ ನೀಡಿ ಕ್ರಮೇಣ ಕಡಿಮೆಯಾಗುವುದಾಗಿ ಹೇಳಿದ್ದರು. 5 ವರ್ಷದಿಂದ ಮಹಿಳೆ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. 2022 ರಲ್ಲಿ ಮರು ತಪಾಸಣೆಗೆ ಒಳಗಾದಾಗ, ಹೊಟ್ಟೆಯಲ್ಲಿ ಜೋಡಿ ಕತ್ತರಿ ಇರುವುದು ಪತ್ತೆಯಾಗಿತ್ತು.
ತಕ್ಷಣವೇ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿದ್ದ ಕತ್ತರಿಗಳನ್ನು ತೆಗೆಯಲಾಗಿತ್ತು. ನೋವು ತಿಂದ ಮಹಿಳೆ ಆರೋಪಿ ವೈದ್ಯರು, ನರ್ಸ್ ಮತ್ತು ಆಸ್ಪತ್ರೆ ಪ್ರಾಧಿಕಾರದ ವಿರುದ್ಧ ದೂರು ಸಲ್ಲಿಸಿದ್ದರು. ನ್ಯಾಯಕ್ಕಾಗಿ ಮೇ 22 ರಿಂದ 104 ದಿನಗಳ ಧರಣಿಯನ್ನು ನಡೆಸುತ್ತಿದ್ದರು. ಇವರಿಗೆ ರಾಜಕೀಯ ಮುಖಂಡರು, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳ ಸದಸ್ಯರು ಸೇರಿದಂತೆ ಹಲವಾರು ಪ್ರಮುಖರು ಬೆಂಬಲ ನೀಡಿದ್ದರು.
ಆರೋಪಿಗಳ ಬಂಧನ : ಮಹಿಳೆಯ ಪ್ರತಿಭಟನೆ ಮತ್ತು ಒತ್ತಡಕ್ಕೆ ಮಣಿದ ಪೊಲೀಸರು ಆರೋಪಿಗಳನ್ನು ಮರು ವಿಚಾರಣೆಗೆ ಕರೆದು ವೈದ್ಯಕೀಯ ನಿರ್ಲಕ್ಷ್ಯ ಕಾಯ್ದೆ ಸೇರಿದಂತೆ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಳಿಕ ಆರೋಪಿಗಳ ಹೇಳಿಕೆಯನ್ನು ದಾಖಲಿಸಿಕೊಂಡು ಅವರನ್ನು ಬಂಧಿಸಲಾಗಿದೆ. ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಹರ್ಷಿನಾಗೆ ಇದು ಮೂರನೇ ಸಿಸೇರಿಯನ್ ಆಗಿತ್ತು.
ಇದನ್ನೂ ಓದಿ: Live in relation: ಕಾಲಕ್ಕೆ ತಕ್ಕಂತೆ ಸಹಜೀವನ ಸಂಗಾತಿ ಬದಲಿಸುವುದು ಸಮಾಜಕ್ಕೆ ಮಾರಕ; ಅಲಹಾಬಾದ್ ಹೈಕೋರ್ಟ್