ನವದೆಹಲಿ: ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲು ನಿರ್ದೇಶನ ನೀಡುವಂತೆ ಕೋರಿ ನೋಯ್ಡಾ ಮೂಲದ ಅಡ್ವೊಕೇಟ್-ಆನ್-ರೆಕಾರ್ಡ್ (ಎಒಆರ್) ಸಂಜಯ್ ಕುಮಾರ್ ಪಾಠಕ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭ ಮತ್ತು ಕುಂಭಮೇಳದಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ಪಾಠಕ್ ಆರೋಪಿಸಿದ್ದಾರೆ.
ನ್ಯಾಯಮೂರ್ತಿ ಡಾ.ಧನಂಜಯ ಯಶ್ವಂತ್ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ನಾಗೇಶ್ವರ ರಾವ್ ಮತ್ತು ರವೀಂದ್ರ ಭಟ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ನ್ಯಾಯಪೀಠವು, ವಕೀಲ ಪಾಠಕ್ ಏಪ್ರಿಲ್ 16 ರಂದು ಸಲ್ಲಿಸಿರುವ ಪಿಐಎಲ್ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಕೋವಿಡ್ ಉಲ್ಬಣಗೊಂಡ ಹಿನ್ನೆಲೆ ಹರಿದ್ವಾರ ಕುಂಭಮೇಳಕ್ಕೆ ಜನರನ್ನು ಆಹ್ವಾನಿಸುವ ಎಲ್ಲಾ ಜಾಹೀರಾತುಗಳನ್ನು ಹಿಂತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮತ್ತು ಉತ್ತರಾಖಂಡ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಪಿಐಎಲ್ನಲ್ಲಿ ಕೋರಲಾಗಿತ್ತು.
ಓದಿ : ನಾರದ ಸ್ಟಿಂಗ್ ಕೇಸ್: ಟಿಎಂಸಿ ನಾಯಕರ ಮೇಲೆ ಸಿಬಿಐ ಕಾನೂನು ಕ್ರಮ ಜರುಗಿಸಲು ಬಂಗಾಳ ಗವರ್ನರ್ ಅನುಮತಿ
ಹರಿದ್ವಾರ ನಗರದಿಂದ ಸಾಮೂಹಿಕ ಸಭೆಯನ್ನು ಆದಷ್ಟು ಬೇಗ ತೆರವುಗೊಳಿಸಲು ಮತ್ತು ಕುಂಭ ಮೇಳದಿಂದ ತಮ್ಮ ಮನೆಗಳಿಗೆ ಮರಳುವ ಜನರ ಸುರಕ್ಷತೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಲು ಕೇಂದ್ರ, ಉತ್ತರಾಖಂಡ ಸರ್ಕಾರ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಗೆ ತಕ್ಷಣ ನಿರ್ದೇಶಿಸುವಂತೆ ಅವರು ಸುಪ್ರೀಂ ಕೋರ್ಟ ಅನ್ನು ಕೋರಿದ್ದಾರೆ. ಕೋವಿಡ್ ನಿಯಂತ್ರಣ ಕುರಿತಂತೆ ಕೇಂದ್ರ ಸರ್ಕಾರ ಮತ್ತು ಎನ್ಡಿಎಂ ನೀಡಿರುವ ಮಾರ್ಗಸೂಚಿಗಳಿಗೆ ಹೊಂದಾಣಿಕೆಯಾಗದ ಯಾವುದೇ ಸಭೆ, ಸಮಾರಂಭಗಳಿಗೆ ಅವಕಾಶ ನೀಡದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲು ಅರ್ಜಿದಾರರು ಕೋರಿದ್ದಾರೆ.