ನವದೆಹಲಿ: ಚುನಾವಣಾ ಬಾಂಡ್‌ಗಳ ಯೋಜನೆಗೆ ಸಂಬಂಧಿಸಿದಂತೆ ಸಲ್ಲಿಕೆ ಆಗಿರುವ ಎಲ್ಲ ಅರ್ಜಿಗಳನ್ನು ಸುಪ್ರೀಂಕೋರ್ಟ್ನ ಪಂಚ ಪೀಠ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ. ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಈ ವಿಷಯವನ್ನು ಕನಿಷ್ಠ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ನಿರ್ಧಾರವನ್ನು ಇಂದು ಪ್ರಕಟಿಸಿದೆ.
ಚೀಫ್ ಜಸ್ಟಿಸ್ ಪ್ರಸ್ತಾಪಿಸಿದ ವಿಷಯದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಸಂವಿಧಾನದ 145 (4) ನೇ ವಿಧಿಗೆ ಸಂಬಂಧಿಸಿದಂತೆ ಈ ವಿಚಾರವನ್ನು ಕನಿಷ್ಠ ಐವರು ಹಾಗೂ ಅದಕ್ಕಿಂತ ಹೆಚ್ಚಿನ ನ್ಯಾಯಮೂರ್ತಿಗಳನ್ನು ಒಳಗೊಡ ಪೀಠದ ಮುಂದೆ ಇರಿಸಲಾಗುವುದು. ಈ ವಿಚಾರವಾಗಿ ಅಕ್ಟೋಬರ್ 30, 2023 ರಂದು ಪೀಠದ ಎದುರು ಬರಲಿದೆ ಎಂದು ಹೇಳಿದ್ದಾರೆ.
ಅಕ್ಟೋಬರ್ 10 ರಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಅಕ್ಟೋಬರ್ 31 ರಂದು ಈ ವಿಷಯದ ಅಂತಿಮ ವಿಚಾರಣೆಯನ್ನು ಪ್ರಾರಂಭಿಸಲಿದೆ ಎಂದು ಹೇಳಿದ್ದರು. ಕೇಂದ್ರ ಸರ್ಕಾರ ಆರಂಭಿಸಿರುವ ಚುನಾವಣಾ ಬಾಂಡ್‌ಗಳ ಸಿಂಧುತ್ವ ಪ್ರಶ್ನಿಸಿ ಹಲವಾರು ಅರ್ಜಿಗಳು ಸಲ್ಲಿಕೆ ಆಗಿದ್ದವು.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಡಾ ಜಯಾ ಠಾಕೂರ್ (ಕಾಂಗ್ರೆಸ್ ನಾಯಕ), ಸ್ಪಂದನ್ ಬಿಸ್ವಾಲ್ ಮತ್ತು ಇತರರು ಯೋಜನೆ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಅಕ್ಟೋಬರ್ 10 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್, ಮೂರು ಕಾರಣಗಳ ಆಧಾರದ ಮೇಲೆ ಚುನಾವಣಾ ಬಾಂಡ್‌ಗಳ ಯೋಜನೆ ಪ್ರಶ್ನಿಸಲಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು. ಚುನಾವಣಾ ಬಾಂಡ್‌ಗಳು ಅನಾಮಧೇಯ ಮೂಲಗಳಿಂದ ಕೂಡಿದ್ದು, ರಾಜಕೀಯ ಪಕ್ಷಗಳಿಗೆ ಧನಸಹಾಯಕ್ಕಾಗಿ ಕಾನೂನು ಬದ್ಧಗೊಳಿಸಲಾಗಿದೆ. ಈ ಅನಾಮಧೇಯ ಹಣವು ನಾಗರಿಕರ ಮಾಹಿತಿಯ ಹಕ್ಕನ್ನು ಉಲ್ಲಂಘಿಸುವ ಧ್ಯೇಯ ಹೊಂದಿದೆ. ಅಷ್ಟೇ ಅಲ್ಲ ಇದು ಭ್ರಷ್ಟಾಚಾರವನ್ನು ಉತ್ತೇಜಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದರು.
ರಾಜಕೀಯ ಪಕ್ಷಗಳಿಗೆ ಅವುಗಳಿಂದ ಕೆಲವು ಪ್ರಯೋಜನಗಳನ್ನು ಪಡೆದ ಕಂಪನಿಗಳಿಂದ ದೊಡ್ಡ ಪ್ರಮಾಣದ ಹಣ ಬರುತ್ತಿದೆ. ಇದು ದೇಶದಲ್ಲಿ ಭ್ರಷ್ಟಾಚಾರವನ್ನು ಉತ್ತೇಜಿಸುವ ಸಾಧನವಾಗಿದೆ ಎಂದು ಭೂಷಣ್ ಸುಪ್ರೀಂ ಕೋರ್ಟ್ನ ಪೀಠದ ಗಮನಕ್ಕೆ ತಂದಿದ್ದರು.
ಪ್ರಶಾಂತ ಭೂಷಣ್ ವಾದದ ವೇಳೆ ಮಧ್ಯಪ್ರವೇಶ ಮಾಡಿದ್ದ ಚೀಫ್ ಜಸ್ಟೀಸ್, ಬ್ಯಾಂಕಿಂಗ್ ಮಾರ್ಗಗಳ ಮೂಲಕ ಹಣದ ಮೂಲ ನಡೆಯುತ್ತದೆಯೇ? ಯೋಜನೆ ಹೇಗೆ ಕೆಲಸ ಮಾಡುತ್ತದೆ? ಚುನಾವಣಾ ಬಾಂಡ್‌ನ ಖರೀದಿಯು ಬ್ಯಾಂಕ್ ವರ್ಗಾವಣೆ ಅಥವಾ ನಗದು ಮೂಲಕ ನಡೆಯುತ್ತದೆಯೇ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಭೂಷಣ್. ಇಬ್ಬರಿಗೂ ಅವಕಾಶವಿದೆ ಎಂದು ಪ್ರತಿಕ್ರಿಯಿಸಿದ್ದರು. "ಇದು ನಿರ್ಣಾಯಕವಾಗಿದೆ, ಏಕೆಂದರೆ ಅದು ಬ್ಯಾಂಕ್ ವರ್ಗಾವಣೆಯ ಮೂಲಕ ಆಗಿದ್ದರೆ. ಖರೀದಿದಾರರನ್ನು ಅನಾಮಧೇಯ ಎಂದು ಪರಿಗಣಿಸಲಾಗುತ್ತದೆ" ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಭೂಷಣ್, ಮೂಲವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗೆ ಗಮನಕ್ಕೆ ಇರುತ್ತದೆ. ಆದರೆ ಅವರು ಹಣದ ಮೂಲವನ್ನು ಬಹಿರಂಗಪಡಿಸುವುದಿಲ್ಲ. ಬಾಂಡ್‌ನ ಈ ಮೊತ್ತವು 10,000 ರಿಂದ 1 ಕೋಟಿ ರೂಪಾಯಿಗಳವರೆಗೆ ಇರಬಹುದು ಎಂದಿದ್ದರು.
ಇದನ್ನು ಓದಿ: 26 ವಾರಗಳಿಗಿಂತ ಹೆಚ್ಚು ಕಾಲ ಗರ್ಭಿಣಿಯ ಭ್ರೂಣದಲ್ಲಿನ ಅಸಹಜತೆ ಬಗ್ಗೆ ಪರೀಕ್ಷಿಸಲು ಏಮ್ಸ್ಗೆ ಸುಪ್ರೀಂ ಕೋರ್ಟ್ ಸೂಚನೆ