ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370 ನೇ ವಿಧಿ ರದ್ದು ಮಾಡಿ, 2 ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಾಗಿಸಿದ್ದರ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಇಂದಿನಿಂದ (ಆಗಸ್ಟ್ 2) ನಿತ್ಯ ನಡೆಯಲಿದೆ. ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಇದರ ವಿಚಾರಣೆ ನಡೆಸಲಿದೆ.
370ನೇ ವಿಧಿ ರದ್ದತಿ ವಿರೋಧಿಸಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅವುಗಳನ್ನು ಒಟ್ಟುಗೂಡಿಸಿರುವ ಸುಪ್ರೀಂನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರಿದ್ದ ಪೀಠವು ವಿಚಾರಣೆ ಆರಂಭಿಸಿದೆ.
ಅರ್ಜಿ, ದಾಖಲೆ ಸಲ್ಲಿಕೆಗೆ ಗಡುವು: ವಿಶೇಷಾಧಿಕಾರ ರದ್ದು ಮಾಡಿದ್ದರ ವಿರುದ್ಧ ಹಲವು ಅರ್ಜಿಗಳು ಬಂದಿದ್ದ ಕಾರಣ ಎಲ್ಲವನ್ನೂ ಒಟ್ಟು ಮಾಡಿರುವ ಸುಪ್ರೀಂ, ಜುಲೈ 27 ರವರೆಗೆ ಈ ಬಗ್ಗೆ ಅರ್ಜಿ, ದಾಖಲೆಗಳನ್ನು ಸಲ್ಲಿಸಲು ಗಡುವು ನೀಡಿತ್ತು. ಸೋಮವಾರ ಮತ್ತು ಶುಕ್ರವಾರ ಹೊರತುಪಡಿಸಿ ದಿನವೂ ಇದರ ವಿಚಾರಣೆ ನಡೆಯಲಿದೆ ಎಂದು ಐವರು ನ್ಯಾಯಾಧೀಶರ ಪೀಠ ಹೇಳಿತ್ತು.
ನಿಗದಿತ ಗಡುವಿನೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಅದರ ನಂತರ ಬಂದ ಯಾವುದೇ ಹೊಸ ರಿಟ್ಗಳನ್ನು ಪರಿಗಣನೆಗೆ ತೆಗೆದು ಕೊಳ್ಳಲಾಗುವುದಿಲ್ಲ. ಇದಕ್ಕೆ ಸಂಬಂಧಿಸಿದ ಯಾವುದೇ ಸಾಮಾನ್ಯ ವಿಷಯಗಳನ್ನು ಆಲಿಸಲಾಗುವುದಿಲ್ಲ. ಉಭಯ ಪಕ್ಷಗಾರರ (ಅರ್ಜಿದಾರರು ಮತ್ತು ಸರ್ಕಾರ) ಕಡೆಯಿಂದ ತಲಾ ಇಬ್ಬರು ವಕೀಲರನ್ನು ನೇಮಿಸಲಾಗಿದೆ. ನಿಗದಿತ ದಿನಾಂಕದ ನಂತರ ಯಾವುದೇ ದಾಖಲೆಗಳನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಏನಿದು 370 ವಿಧಿ ರದ್ದು ಕೇಸ್: ಸಂವಿಧಾನದ 370ನೇ ವಿಧಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿತ್ತು. ಅದರಂತೆ ಅದು ಪ್ರತ್ಯೇಕ ಸಂವಿಧಾನ, ರಾಜ್ಯಾಡಳಿತವನ್ನು ಹೊಂದಿತ್ತು. ಭಾರತದ ಭೂಭಾಗವಾಗಿದ್ದರೂ ಇತರೆಡೆಯ ಕೇಂದ್ರದ ಅಧಿಕಾರ ಅಲ್ಲಿ ಚಲಾವಣೆ ಸಾಧ್ಯವಿರಲಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2019 ರ ಆಗಸ್ಟ್ 5 ರಂದು ವಿಶೇಷ ಮಸೂದೆ ಮಂಡಿಸಿ 370ನೇ ವಿಧಿಯನ್ನು ರದ್ದು ಮಾಡಿ, ಸಂಸತ್ತಿನಿಂದ ಒಪ್ಪಿಗೆ ಪಡೆದುಕೊಂಡಿತ್ತು.
4 ವರ್ಷಗಳ ಬಳಿಕ ವಿಚಾರಣೆ ಶುರು: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದು ಮಾಡಿದ ಸುಮಾರು 4 ವರ್ಷಗಳ ಬಳಿಕ ಇದರ ವಿಚಾರಣೆ ಆರಂಭವಾಗಿದೆ. ಕಣಿವೆ ರಾಜ್ಯವನ್ನು ಅಖಂಡ ಭಾರತಕ್ಕೆ ಸೇರಿಸಿದ ಬಳಿಕ ಅಲ್ಲಿ ಕಲ್ಲು ತೂರಾಟ, ಗಲಭೆಗಳು, ಪ್ರತ್ಯೇಕತಾ ಹೋರಾಟಗಳು ತೀವ್ರಗತಿಯಲ್ಲಿ ಇಳಿಮುಖವಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ವಿಧಿ ರದ್ದು ಮಾಡಿ ರಾಜ್ಯವನ್ನು ಜಮ್ಮು- ಕಾಶ್ಮೀರ ಮತ್ತು ಲಡಾಖ್ ಎಂಬ 2 ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಾಗಿದೆ. ಈ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ. ಅದನ್ನು 2019 ರಲ್ಲಿ ಸಂವಿಧಾನ ಪೀಠಕ್ಕೆ ಕಳುಹಿಸಲಾಯಿತು.
ಇದನ್ನೂ ಓದಿ: 500 ರೂಪಾಯಿಗಾಗಿ ಪತಿ ಕೊಂದ ಅಪರಾಧ.. ಮಹಿಳೆಯ ಶಿಕ್ಷೆ ಕಡಿತಗೊಳಿಸಿದ ಸುಪ್ರೀಂಕೋರ್ಟ್