ನವದೆಹಲಿ: ಬ್ರಿಟಿಷರು ಭಾರತದಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಲು ಜಾರಿಗೆ ತಂದಿದ್ದ ದೇಶದ್ರೋಹ ಕಾನೂನು (sedition law) ಈಗಲೂ ಅವಶ್ಯಕತೆ ಇದೆಯೇ ಎಂಬ ಬಗ್ಗೆ ಈ ಮೊದಲು ಕೆಲವು ಚರ್ಚೆಗಳಾಗಿದ್ದವು. ಈಗ ದೇಶದ್ರೋಹದ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರ ತ್ರಿಸದಸ್ಯ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಮಹಾತ್ಮಾ ಗಾಂಧಿಯಂತಹ ಮಹಾನ್ ನಾಯಕರನ್ನು ನಿಯಂತ್ರಿಸಲು ಬ್ರಿಟಿಷ್ ಸರ್ಕಾರ ಜಾರಿಗೊಳಿಸಿದ್ದ ದೇಶದ್ರೋಹ ಕಾನೂನನ್ನು ಏಕೆ ರದ್ದುಗೊಳಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕಳೆದ ವರ್ಷ ಏಪ್ರಿಲ್ನಲ್ಲಿ ಪ್ರಶ್ನಿಸಿತ್ತು. ಅಲ್ಲಲ್ಲಿ ಈ ಕಾನೂನಿನ ದುರುಪಯೋಗದ ಬಗ್ಗೆ ವರದಿಗಳಾಗಿದ್ದ ಬಗ್ಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿತ್ತು.
ಭಾರತೀಯ ದಂಡಸಂಹಿತೆಯ 124ಎ ವಿಧಿಯ ಮಾನ್ಯತೆಯನ್ನು ಪ್ರಶ್ನಿಸಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಮಾಜಿ ಮೇಜರ್ - ಜನರಲ್ ಎಸ್ಜಿ ವೊಂಬ್ಯಾಟ್ಕೆರೆ ಅವರು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ಕಾನೂನಿ ದುರ್ಬಳಕೆ ಅತ್ಯಂತ ಪ್ರಮುಖ ಕಾಳಜಿಯಾಗಿದ್ದು, ಸರ್ಕಾರದ ವಿರುದ್ಧ ತೋರುವ ಅಸಮಾಧಾನವನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಈ ಕಾಯ್ದೆ ಮೂಲಕ ನೋಡಲಾಗುತ್ತದೆ.
ಇದನ್ನೂ ಓದಿ: ರಾಜಿ ಮೂಲಕ ಪೋಕ್ಸೋ ಪ್ರಕರಣ ಇತ್ಯರ್ಥ ಕೋರಿ ಅರ್ಜಿ ರದ್ದು: ಪರಿಶೀಲನೆಗೆ ಮುಂದಾದ ಹೈಕೋರ್ಟ್