ನವದೆಹಲಿ: ಪೂಜಾ ಮತ್ತು ಶ್ಯಾಮ್ (ಹೆಸರು ಬದಲಾಯಿಸಲಾಗಿದೆ) ತಮ್ಮ ಶೈಕ್ಷಣಿಕ ಅವಧಿಯಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಈ ಜೋಡಿ 2011ರಲ್ಲಿ ಹಸೆಮಣೆ ಏರಿತ್ತು. 2016ರ ವರೆಗೆ ಸಂತೋಷದಿಂದ ಜೀವನ ನಡೆಸಿದ್ದರು. ಆದರೆ ಇತ್ತೀಚೆಗೆ ಇವರ ಸಂಬಂಧ ಹದಗೆಟ್ಟಿತ್ತು. ದಂಪತಿ ಪದೇ ಪದೇ ಜಗಳವಾಡುತ್ತಿದ್ದರು. 2023ರ ಜನವರಿಯಲ್ಲಿ ಪತಿ ಶ್ಯಾಮ್ ಆತ್ಮಹತ್ಯೆಗೆ ಶರಣಾಗಿದ್ದರು.
ಶ್ಯಾಮ್ ಮರಣ ಹೊಂದಿದಾಗ ಆಗಷ್ಟೇ ಗರ್ಭಿಣಿಯಾಗಿದ್ದ ಪೂಜಾ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಡಿ ಜೈಲು ಸೇರಿದ್ದಳು. ಜನವರಿ 31ರಂದು ಅವರನ್ನು ಕಸ್ಟಡಿಗೆ ಪಡೆಯಲಾಗಿತ್ತು. ಜೂ.30ರಂದು ಸುಪ್ರೀಂಕೋರ್ಟ್ ಆಕೆಯನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು. ಆದರೆ ಆಕೆ ಗರ್ಭಿಣಿಯಾಗಿರುವುದರಿಂದ ಈ ವಾರದ ಆರಂಭದಲ್ಲಿ ಆಕೆಗೆ ಷರತ್ತುಬದ್ಧ ಜಾಮೀನು ನೀಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಕಕ್ಷಿದಾರರ ಪರವಾಗಿ ಹಾಜರಾದ ವಕೀಲರ ವಾದವನ್ನು ಆಲಿಸಿದ ಬಳಿಕ ಮತ್ತು ಮೇಲ್ಮನವಿ ದಾಖಲೆಗಳನ್ನು ಪರಿಶೀಲಿಸಿದ ನಂತರ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಲಾಗಿದೆ. ವಿಚಾರಣಾ ನ್ಯಾಯಾಲಯವು ಶಿಕ್ಷೆ ವಿಧಿಸಲು ಸೂಕ್ತವೆಂದು ಪರಿಗಣಿಸಬಹುದಾದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.
ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಕೇವಲ ಅನುಮಾನದ ಆಧಾರದ ಮೇಲೆ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೂಜಾಳ ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಮಾರ್ಚ್ 13 ರಂದು ಪೊಲೀಸರು ಆಕೆಯ ವಿರುದ್ಧ ಸೆಕ್ಷನ್ 306 ಮತ್ತು 342 ಐಪಿಸಿ ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಮೃತ ಶ್ಯಾಮ್ ಬುಂದೇಲ್‌ಖಂಡ ವಿಶ್ವವಿದ್ಯಾಲಯದಲ್ಲಿ ಫಿಸಿಯೋಥೆರಪಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು.
ಜನವರಿ 24 ರಂದು ಉತ್ತರ ಪ್ರದೇಶದ ಝಾನ್ಸಿಯಲ್ಲಿ ದಾಖಲಾದ ಪ್ರಕರಣದಲ್ಲಿ ಏಪ್ರಿಲ್‌ನಲ್ಲಿ ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರ್ಜಿದಾರಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಳು. ಆರೋಪಿಗಳ ಪರ ವಕೀಲ ನಮಿತ್ ಸಕ್ಸೇನಾ ಅವರು ಸುಪ್ರೀಂ ಕೋರ್ಟ್‌ಗೆ ಹಾಜರಾಗಿದ್ದರು. ತನಿಖೆಯನ್ನು ಪೂರ್ಣಗೊಳಿಸಿದ ನಂತರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆದ್ದರಿಂದ, ಅರ್ಜಿದಾರಳನ್ನು ನ್ಯಾಯಾಂಗ ಬಂಧನದಲ್ಲಿಡುವ ಯಾವುದೇ ಉದ್ದೇಶ ಸೂಕ್ತವಲ್ಲ. ಅವಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದರಿಂದ ಯಾವುದೇ ಗಂಭೀರ ಅಪಾಯವಿಲ್ಲ. ಅಲ್ಲದೇ ಮಗುವಿನ ಬಗ್ಗೆ ಸುಪ್ರೀಂ ಕೋರ್ಟ್ ಗಮನ ಹರಿಸಬೇಕು ಎಂದು ಸಕ್ಸೇನಾ ವಾದ ಮಂಡಿಸಿದರು.
ಆಪಾದಿತ ಘಟನೆಯ ನಂತರ 6 ದಿನಗಳ ವಿಳಂಬದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ಇದು ಮಾಹಿತಿದಾರರಿಗೆ (ಮೃತರ ಸಹೋದರಿ) ಮತ್ತು ಅವರ ಕುಟುಂಬಕ್ಕೆ ಸುಳ್ಳು ಕಥೆ ಕಟ್ಟಲು ಮತ್ತು ಅರ್ಜಿದಾರಳನ್ನು ಸಿಲುಕಿಸಲು ಸಾಕಷ್ಟು ಅವಕಾಶವನ್ನು ನೀಡಿತು ಎಂದು ವಕೀಲರು ವಾದಿಸಿದರು. ಆದರೆ ಮೃತರ ಆತ್ಮಹತ್ಯೆಗೆ ಅಪೀಲುದಾರರು (ಆರೋಪಿಗಳು) ಕುಮ್ಮಕ್ಕು ನೀಡಿದ್ದಾರೆ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಅರ್ಜಿದಾರರಿಗೆ ಅಕ್ರಮ ಸಂಬಂಧವಿದೆ ಎಂದು ಮೃತರ ಸಹೋದರಿ ಆರೋಪಿಸಿದ್ದು, ಪೂಜಾ ತನ್ನ ಸ್ನೇಹಿತನೊಂದಿಗೆ ಸೇರಿ ತನ್ನ ಸಹೋದರನನ್ನು ಮನೆಯ ಒಂದು ಭಾಗದಲ್ಲಿ ನಡೆಸುತ್ತಿದ್ದ ಕ್ಲಿನಿಕ್‌ನಲ್ಲಿ ಸುಟ್ಟು ಹಾಕಿರುವ ಶಂಕೆ ವ್ಯಕ್ತಪಡಿಸಿದ್ದರು.
ಷರತ್ತುಬದ್ಧ ಜಾಮೀನು: ವಕೀಲರ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್ ಮೇಲ್ಮನವಿಯನ್ನು ಅಂಗೀಕರಿಸಿ ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿತು. 30 -06- 2023 ರ ಈ ನ್ಯಾಯಾಲಯದ ಆದೇಶವನ್ನು ನಾವು ಗಮನಿಸುತ್ತೇವೆ. ಮೇಲ್ಮನವಿದಾರರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಲಾಗಿದೆ. ಏಕೆಂದರೆ ಅವಳು ಗರ್ಭಿಣಿಯಾಗಿದ್ದಾಳೆ ಎಂದು ಪೀಠವು ಆಕೆಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಇದನ್ನೂ ಓದಿ: ಸಂಸದ ಪಿ ರವೀಂದ್ರನಾಥ್ ಅವರ ಆಯ್ಕೆ ಅಸಿಂಧು ಎಂದಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ