ನವದೆಹಲಿ: 2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಗಿಸಿದ್ದು, ಸಮಯ ಕಳೆದಂತೆ ಈ ಪ್ರಕರಣ ನಿಷ್ಪ್ರಯೋಜಕ ಎಂದು ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?: ಗೋಧ್ರಾ ನಂತರದ ಗಲಭೆಗಳ ಹಿನ್ನೆಲೆಯಲ್ಲಿ ಆರಂಭಿಸಲಾದ ಪ್ರಕ್ರಿಯೆಗಳ ಕುರಿತು ಉಲ್ಲೇಖಿಸಿದ ನ್ಯಾಯಾಲಯ, ನ್ಯಾಯಾಲಯದ ಆದೇಶದ ಮೇರೆಗೆ ವಿಶೇಷ ತನಿಖಾ ತಂಡವು ಮೊಕದ್ದಮೆ ಹೂಡಿರುವ ಒಂಬತ್ತು ಪ್ರಮುಖ ಪ್ರಕರಣಗಳ ಪೈಕಿ ಎಂಟು ಪ್ರಕರಣಗಳಲ್ಲಿ ವಿಚಾರಣೆ ಮುಗಿದು ಹೋಗಿದೆ. ಸಮಯ ಕಳೆದಂತೆ ಪ್ರಕರಣ ನಿರುಪಯುಕ್ತ ಎಂದು ನ್ಯಾಯಪೀಠ ಹೇಳಿದೆ.
ಅರ್ಜಿ ಸಲ್ಲಿಸಿದ್ದು ಯಾರು?: ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್, ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಜೆ ಬಿ ಪರ್ದಿವಾಲ್ ಅವರಿದ್ದ ಪೀಠ, ಈ ನಿರುಪಯುಕ್ತ ಪ್ರಕರಣಗಳ ವಿಲೇವಾರಿ ಮುಗಿಸಿದೆ. 2002ರ ಗುಜರಾತ್ ಗಲಭೆಯಲ್ಲಿ ನಡೆದ ಹಿಂಸಾಚಾರ ಪ್ರಕರಣಗಳ ಸೂಕ್ತ ತನಿಖೆ ನಡೆಸುವಂತೆ ಕೋರಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಸಂತ್ರಸ್ತರು ಮತ್ತು ಎನ್‌ಜಿಒಗಳು ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಉಳಿದಿದ್ದವು.
ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಸುಪ್ರೀಂ ಜಡ್ಜ್‌ಗಳಲ್ಲಿ ಮೂಡದ ಒಮ್ಮತ, ತ್ರಿಸದಸ್ಯ ಪೀಠದಿಂದ ವಿಚಾರಣೆ
ಕೋರ್ಟ್ ವಿಚಾರಣೆಯ ಹಾದಿ..: ಗೋಧ್ರಾ ಗಲಭೆ ಪ್ರಕರಣಗಳ ತನಿಖೆಗಾಗಿ ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿತ್ತು. ಒಂಬತ್ತು ಪ್ರಕರಣಗಳ ಪೈಕಿ ಎಂಟು ಪ್ರಕರಣಗಳ ವಿಚಾರಣೆ ಮುಕ್ತಾಯಗೊಳಿಸಿದೆ. ನರೋದಾ ಗಾಂನ ಒಂದು ಪ್ರಕರಣದ ಅಂತಿಮ ವಾದಗಳು ನಡೆಯುತ್ತಿವೆ ಎಂದು ತಿಳಿಸಿದೆ. ಎಲ್ಲ ಪ್ರಕರಣಗಳು ಈಗ ನಿರುಪಯುಕ್ತವಾಗಿರುವ ಕಾರಣ ನ್ಯಾಯಾಲಯ ಈ ಅರ್ಜಿಗಳನ್ನು ಪರಿಗಣಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.