ನವದೆಹಲಿ: ಬಹುಕಾಲದಿಂದ ಬಾಕಿ ಉಳಿದಿರುವ ಆಸ್ತಿ ವಿವಾದವನ್ನು ಬಗೆಹರಿಸಲು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಮತ್ತು ಅವರ ತಾಯಿ ಬೀನಾ ಮೋದಿ ಅವರ ಮಧ್ಯಸ್ಥಿಕೆದಾರರಾಗಿ ಸುಪ್ರೀಂಕೋರ್ಟ್ ಇಂದು ಇಬ್ಬರು ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿದೆ.
ಐಪಿಎಲ್ ಆರಂಭಿಸಿದ್ದ ಲಲಿತ್ ಮೋದಿ ಅವರು ಬಿಸಿಸಿಐಗೆ ನೂರಾರು ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದು, 2010ರಲ್ಲೇ ಭಾರತದಿಂದ ಪರಾರಿಯಾಗಿ ಲಂಡನ್ನಲ್ಲಿದ್ದಾರೆ. ಪ್ರಕರಣದ ವಿಚಾರಣೆಯನ್ನು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಲೇ ಇದೆ.
ಅಷ್ಟೇ ಅಲ್ಲ, ಹರಿಯಾಣದಲ್ಲಿ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಸಹಾಯದೊಂದಿಗೆ ಕಾನೂನುಬಾಹಿರವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಆರೋಪ ಕೂಡ ಎದುರಿಸುತ್ತಿದ್ದು, ಈ ಸಂಬಂಧ ಲಲಿತ್ ಮೋದಿ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣ ಕೂಡ ದಾಖಲಾಗಿದೆ.
ಇದನ್ನೂ ಓದಿ: 'ಬೆಟ್ಟಿಂಗ್ ಕಂಪನಿಗಳೂ IPL ತಂಡ ಖರೀದಿಸಬಹುದು': ಹೊಸ ಫ್ರಾಂಚೈಸಿ ವಿರುದ್ಧ ಲಲಿತ್ ಮೋದಿ ಗರಂ
ಲಲಿತ್ ಮೋದಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಭಾರತ ಸರ್ಕಾರ ತನ್ನ ಕೆಲಸ ಆರಂಭಿಸಿದ್ದು, ಈಗಾಗಲೇ ಲಲಿತ್ ಮೋದಿಗೆ ಸೇರಿದ 281 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
2019ರ ನವೆಂಬರ್ನಲ್ಲಿ ತಂದೆ, ಕೈಗಾರಿಕೋದ್ಯಮಿ ಕೆಕೆ ಮೋದಿ ನಿಧನರಾದ ಬಳಿಕ ಲಲಿತ್ ಮೋದಿ ತನ್ನ ಕುಟುಂಬಕ್ಕೆ ಸೇರಿದ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಕುಟುಂಬದಲ್ಲಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಲಲಿತ್ ಮೋದಿ ಸಿಂಗಾಪುರದಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆಗಳನ್ನು ಆರಂಭಿಸಿದ್ದರು. ಇದರ ವಿರುದ್ಧ ಲಲಿತ್ ಮೋದಿ ತಾಯಿ ಬೀನಾ ಮೋದಿ ಮತ್ತು ಮತ್ತಿಬ್ಬರು ಮಕ್ಕಳು ಕೋರ್ಟ್ ಮೆಟ್ಟಿಲೇರಿದ್ದರು.
ಈ ಬಗ್ಗೆ ಇಂದು ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ಮಾಜಿ ನ್ಯಾಯಮೂರ್ತಿಗಳಾದ ವಿಕ್ರಮ್‌ಜಿತ್ ಸೇನ್ ಮತ್ತು ಕುರಿಯನ್ ಜೋಸೆಫ್ ಅವರನ್ನು ಮಧ್ಯವರ್ತಿಗಳಾಗಿ ನೇಮಿಸಿದೆ. ಸಿಂಗಾಪುರದ ಬದಲಾಗಿ ಹೈದರಾಬಾದ್‌ನಲ್ಲಿರುವ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ನಿರ್ದೇಶನ ನೀಡಿದೆ.