ನವದೆಹಲಿ: ಕಾರ್ಮಿಕರ ಮೇಲೆ ಪರಿಣಾಮ ಬೀರುವ ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಸೋಮವಾರ ಮತ್ತು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಇದರಲ್ಲಿ ಬ್ಯಾಂಕಿಂಗ್ ವಲಯವು ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ ತಿಳಿಸಿದೆ. ಮಾರ್ಚ್ 22, 2022 ರಂದು ನಡೆದಿದ್ದ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯ ಸಭೆಯ ನಂತರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ವಿವಿಧ ರಾಜ್ಯಗಳಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿಕೊಂಡು ಎರಡು ದಿನಗಳ ಅಖಿಲ ಭಾರತ ಮುಷ್ಕರವನ್ನು ಘೋಷಿಸಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಯೋಜನೆ ಮತ್ತು ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ 2021 ಅನ್ನು ವಿರೋಧಿಸಿ ಬ್ಯಾಂಕ್ ಒಕ್ಕೂಟಗಳು ಮುಷ್ಕರದಲ್ಲಿ ಭಾಗವಹಿಸುತ್ತಿವೆ.
ಇದನ್ನೂ ಓದಿ: ವಿದ್ಯಾರ್ಥಿನಿ ಮಿಸ್ಬಾ ಆತ್ಮಹತ್ಯೆ ಪ್ರಕರಣ.. ಶಾಲೆಯ ಪ್ರಿನ್ಸಿಪಾಲ್ ಬಂಧನ
ಬ್ಯಾಂಕ್ ಗ್ರಾಹಕರಿಗೆ ಸಂಕಷ್ಟ: ಮಾರ್ಚ್ 28 ಮತ್ತು 29 ರಂದು ಬ್ಯಾಂಕಿಂಗ್ ಸೇವೆಗಳ ಮೇಲೆ ಈ ಮುಷ್ಕರ ಪರಿಣಾಮ ಬೀರಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ತಿಳಿಸಿದೆ. ಬ್ಯಾಂಕ್‌ಗಳಲ್ಲಿ ನಿವೃತ್ತಿಯಾಗಲಿರುವ ಕಾರ್ಮಿಕರಿಗೆ ಪಿಂಚಣಿ ವ್ಯವಸ್ಥೆ ಇದೆ. ಆದರೆ ಅವರು ಮುಷ್ಕರದಲ್ಲಿ ಭಾಗವಹಿಸಿದರೆ ಅದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಸಹ ತಿಳಿಸಲಾಗಿದೆ.
ಕಲ್ಲಿದ್ದಲು, ಉಕ್ಕು, ತೈಲ, ಟೆಲಿಕಾಂ, ಅಂಚೆ, ಆದಾಯ ತೆರಿಗೆ, ತಾಮ್ರ ಮತ್ತು ವಿಮೆಯಂತಹ ವಿವಿಧ ಕ್ಷೇತ್ರಗಳ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಹಾಗೆ ರೈಲ್ವೆ ಮತ್ತು ರಕ್ಷಣಾ ವಲಯದ ಒಕ್ಕೂಟಗಳು ದೇಶಾದ್ಯಂತ ನೂರಾರು ಸ್ಥಳಗಳಲ್ಲಿ ಮುಷ್ಕರವನ್ನು ಬೆಂಬಲಿಸಲು ಸಾಮೂಹಿಕವಾಗಿ ಮುಂದಾಗಿದೆ ಎಂದು ತಿಳಿದುಬಂದಿದೆ.