ನಾಗ್ಪುರ(ಮಹಾರಾಷ್ಟ್ರ) : ಬಾಲಿವುಡ್ ನಟ ಸಂಜಯ ದತ್ತ ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಇದೊಂದು ಸೌಹಾರ್ದದ ಭೇಟಿಯಾಗಿತ್ತೆಂದು ವರದಿಗಳು ತಿಳಿಸಿವೆ.

ಸಂಜಯ್ ತಮ್ಮನ್ನು ಭೇಟಿಯಾದ ಚಿತ್ರಗಳನ್ನು ಗಡ್ಕರಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಗಡ್ಕರಿ ಹಾಗೂ ಅವರ ಪತ್ನಿ ಕಂಚಾರ ಗಡ್ಕರಿ ಅವರಿಗೆ ಸಂಜಯ್ ದತ್ ವಂದಿಸುತ್ತಿರುವುದನ್ನು ಈ ಚಿತ್ರಗಳಲ್ಲಿ ಕಾಣಬಹುದು. ಚಿತ್ರದಲ್ಲಿ ಕಾಣುವ ಮೂವರೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದು, ಮಾಸ್ಕ್ ಧರಿಸುವುದನ್ನು ಮರೆತಿಲ್ಲ.

"ನಟ ಸಂಜಯ್ ದತ್ ಅವರು ನಮ್ಮ ಮನೆಗೆ ಕುಶಲೋಪರಿ ಭೇಟಿ ನೀಡಿದ್ದರು" ಎಂದು ಗಡ್ಕರಿ ತಮ್ಮ ಇನ್ಸ್ಟಾ ಪೋಸ್ಟ್ಗೆ ಕ್ಯಾಪ್ಷನ್ ನೀಡಿದ್ದಾರೆ.

ಸದ್ಯ ಸಂಜಯ್ ದತ್ ತಾವು ಅಭಿನಯಿಸಿರುವ 'ಕೆಜಿಎಫ್ ಚಾಪ್ಟರ್-2' ಚಿತ್ರದ ರಿಲೀಸ್ ಎದುರು ನೋಡುತ್ತಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿದ್ದಾರೆ. ಕನ್ನಡ ಬ್ಲಾಕ್ಬಸ್ಟರ್ 'ಕೆಜಿಎಫ್ ಚಾಪ್ಟರ್-1' ಚಿತ್ರದ ಮುಂದುವರಿದ ಭಾಗ ಇದಾಗಿದೆ. ಕಳೆದ ವರ್ಷ ಸಂಜಯ್ ದತ್ ಕ್ಯಾನ್ಸರಿಗೆ ತುತ್ತಾಗಿದ್ದರು. ನಂತರ 2020ರ ಅಕ್ಟೋಬರಿನಲ್ಲಿ ತಾವು ಕ್ಯಾನ್ಸರಿನಿಂದ ಗುಣಮುಖರಾಗಿರುವುದಾಗಿ ಸಂಜಯ್ ಹೇಳಿದ್ದರು.


