ಅಹಮದಾಬಾದ್ (ಗುಜರಾತ್): ಜಾರ್ಖಂಡ್ನ ಸಮ್ಮೇದ್ ಶಿಖರ್ಜಿ ದೇಗುಲವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಜಾರ್ಖಂಡ್ ಸರ್ಕಾರದ ವಿರುದ್ಧ ಮತ್ತು ಗುಜರಾತ್‌ನ ಶತ್ರುಂಜಯ ಶಿಖರದ ಪಾಲಿಟಾನಾ ದೇವಾಲಯ ಸಂಕೀರ್ಣದಲ್ಲಿ ನಡೆಯುತ್ತಿರುವ ಅತಿಕ್ರಮಣ ವಿರುದ್ಧ ಜೈನರು ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳನ್ನು ಪ್ರಾರಂಭಿಸಿದ್ದಾರೆ.
ಸಮ್ಮೇದ್ ಪರ್ವತ ಮತ್ತು ಶತ್ರುಂಜಯ ಶಿಖರ ಎರಡೂ ಜೈನ ಸಮುದಾಯದ ಧಾರ್ಮಿಕ ಸ್ಥಳಗಳಾಗಿವೆ. ಈ ಸ್ಥಳಗಳಿಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಕನಿಷ್ಠ ಟ್ರಸ್ಟಿಗಳನ್ನು ಸರ್ಕಾರ ಕೇಳಬೇಕು. ಈ ಎರಡೂ ಸ್ಥಳಗಳನ್ನು ಪ್ರವಾಸಿ ತಾಣಗಳೆಂದು ಘೋಷಿಸುವ ನಿರ್ಧಾರವನ್ನು ಟ್ರಸ್ಟಿಗಳ ಒಪ್ಪಿಗೆ ಪಡೆದ ತೆಗೆದುಕೊಳ್ಳಬೇಕಾಗಿತ್ತು ಎಂದು ಗುಜರಾತ್‌ನ ಖ್ಯಾತ ಜೈನ ಸನ್ಯಾಸಿ ರತ್ನಸುಂದರ್ ಸೂರೀಶ್ವರ್ ಮಹಾರಾಜ್ ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ಶ್ರೀ ಸಮ್ಮೇದ್ ಶಿಖರ್ಜಿಗಾಗಿ ಜಾರ್ಖಂಡ್ ಸರ್ಕಾರದ ವಿರುದ್ಧ ಉಪವಾಸ ಕುಳಿತ ಜೈನ ಸನ್ಯಾಸಿ ನಿಧನ
ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಗುಜರಾತಿನ ಶತ್ರುಂಜಯ್ ಶಿಖರದ ಮೇಲಿರುವ ಪಾಲಿಟಾನಾ ದೇವಸ್ಥಾನದ ಸಂಕೀರ್ಣದಲ್ಲಿನ ಅತಿಕ್ರಮಣವನ್ನು 'ವಿಧ್ವಂಸಕ ಕೃತ್ಯ' ಎಂದು ಕರೆದರು. ಅಲ್ಲದೇ, ತಕ್ಷಣವೇ ಈ ಕಾರ್ಯವನ್ನು ಸಂಪೂರ್ಣವಾಗಿ ನಿಲ್ಲಬೇಕು. ಸದ್ಯ ಪಾಲಿಟಾನಾದಲ್ಲಿ 24 ಗಂಟೆಗಳ ಪೊಲೀಸ್ ಭದ್ರತೆ ನಿಯೋಜಿಸಿರುವುದು ಸ್ವಾಗತ. ಆದರೆ, ಇದು ಸಾಕಾಗುವುದಿಲ್ಲ ಎಂದು ಪ್ರತಿಪಾದಿಸಿದರು.
ಯಾತ್ರಾ ಕೇಂದ್ರಗಳ ಪಾವಿತ್ರ್ಯತೆ ಹಾಳುಮಾಡಲು ಬಿಡುವುದಿಲ್ಲ: ನಾವು ಯಾವಾಗಲೂ ಶಾಂತಿ ಮತ್ತು ಅಹಿಂಸೆ ಮಾರ್ಗವನ್ನು ಅನುಸರಿಸಿದ್ದೇವೆ. ಅದನ್ನು ಮುಂದೆ ಕೂಡ ಅನುಸರಿಸುತ್ತೇವೆ. ಆದರೆ, ಯಾರಾದರೂ ನಮ್ಮ ಮನೆಗಳ ಮೇಲೆ ದಾಳಿ ಮಾಡಿ ನಮ್ಮನ್ನು ಹೊರಗೆ ಹಾಕಲು ಪ್ರಯತ್ನಿಸಿದರೆ ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ನಾವು ನಮ್ಮ ಧ್ವನಿ ಎತ್ತುತ್ತೇವೆ. ಜೈನ ಸಮುದಾಯದ ಯಾತ್ರಾ ಕೇಂದ್ರಗಳ ಪಾವಿತ್ರ್ಯತೆ ಹಾಳುಮಾಡಲು ನಾವು ಬಿಡುವುದಿಲ್ಲ ಎಂದು ಸೂರೀಶ್ವರ್ ಮಹಾರಾಜ್ ಹೇಳಿದರು.
ಪ್ರತಿಯೊಬ್ಬ ನಾಗರಿಕರನ್ನು ರಕ್ಷಿಸುವುದು ಮತ್ತು ಅವರ ಸಂಸ್ಕೃತಿ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಯಾವುದೇ ಯಾತ್ರಾ ಸ್ಥಳ. ಹಾಗೆಯೇ ಒಂದು ಸಮುದಾಯದ ನಂಬಿಕೆಗಳು ಮತ್ತು ನಂಬಿಕೆಗಳನ್ನು ಪ್ರವಾಸೋದ್ಯಮದ ಹೆಸರಿನಲ್ಲಿ ಘಾಸಿಗೊಳಿಸಲು ಸಾಧ್ಯವಿಲ್ಲ. ನಮ್ಮ ಶ್ರದ್ಧಾ ಸ್ಥಳಗಳ ಬಳಿ ಎಲ್ಲಿಯೂ ಮದ್ಯ ಮಾರಾಟ ಮತ್ತು ಮಾಂಸಾಹಾರ ಸೇವನೆಗೆ ಅವಕಾಶ ನೀಡಲು ಆಗುವುದಿಲ್ಲ ಎಂದು ತಿಳಿಸಿದರು.
ಪುಣ್ಯ ಕ್ಷೇತ್ರಗಳನ್ನು ಪ್ರವಾಸಿ ತಾಣವನ್ನಾಗಿ ಮಾಡಿದ ನಂತರ ಮದ್ಯ ಮತ್ತು ಮಾಂಸಾಹಾರ ಮಾರಾಟದ ಮೇಲೆ ಸರ್ಕಾರ ನಿಷೇಧ ಹೇರಿದರೆ ಒಪ್ಪುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೂರಿಶ್ವರ್ಜಿ ಮಹಾರಾಜ್, ಸರ್ಕಾರವು ಹಲವಾರು ಸ್ಥಳಗಳಲ್ಲಿ ಅನೇಕ ಕಾನೂನುಗಳನ್ನು ವಿಧಿಸಿದೆ. ಆದರೆ, ಅವುಗಳ ಪಾಲನೆ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ವಾಸ್ತವದಲ್ಲಿ ಸರ್ಕಾರ ರೂಪಿಸಿರುವ ನಿಯಮಗಳನ್ನು ಯಾರೂ ಪಾಲಿಸುತ್ತಿಲ್ಲ. ನಾವು ಮದ್ಯ ಮತ್ತು ಮಾಂಸಾಹಾರ ಸೇವನೆಯನ್ನು ಕಟ್ಟುನಿಟ್ಟಾಗಿ ವಿರೋಧಿಕೊಂಡು ಬಂದಿದ್ದೇವೆ. ನಮ್ಮ ಪವಿತ್ರ ದೇಗುಲಗಳ ಬಳಿ ಎಲ್ಲಿಯೂ ಇವುಗಳಿಗೆ ಅನುಮತಿಸುವುದಿಲ್ಲ ಎಂದು ಎಚ್ಚರಿಸಿದರು.
ಜೈಪುರದಲ್ಲಿ ಜೈನ ಸನ್ಯಾಸಿ ಸಾವು: ಜೈನರ ಶ್ರದ್ಧಾ ಕೇಂದ್ರಗಳನ್ನು ಪ್ರವಾಸಿ ತಾಣಗಳೆಂದು ಘೋಷಿಸುವ ಸರ್ಕಾರಗಳ ನಡೆ ಬಗ್ಗೆ ವಿರುದ್ಧ ರಾಜಸ್ಥಾನದ ಜೈಪುರದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜೈನ ಸನ್ಯಾಸಿಯೊಬ್ಬರು ಮೃತಪಟ್ಟಿದ್ದಾರೆ. ಜಾರ್ಖಂಡ್ನ ಸಮ್ಮೇದ್ ಶಿಖರ್ಜಿ ಮಂದಿರವನ್ನು ಪ್ರವಾಸಿ ಸ್ಥಳವೆಂದು ಘೋಷಿಸಿರುವ ನಿರ್ಧಾರ ಹಿಂಪಡೆಯಬೇಕೆಂದು ಡಿಸೆಂಬರ್ 25ರಿಂದ ಸನ್ಯಾಸಿ ಅಮರಣಾಂತ ಉಪವಾಸ ಕೈಗೊಂಡಿದ್ದರು.
ಇದನ್ನೂ ಓದಿ: ಸಮ್ಮೇದ್ ಶಿಖರ್ಜಿಗಾಗಿ ಮುಂಬೈನಲ್ಲಿ ಜೈನ ಸಮುದಾಯದಿಂದ ಬೃಹತ್ ಪ್ರತಿಭಟನೆ