ಮೀರತ್(ಉತ್ತರಪ್ರದೇಶ): ಮಗು ಹುಟ್ಟುತ್ತಿರುವಂತೆಯೇ ಅದನ್ನು ತಂದೆಯೇ ಮಾರಿದ ಕರುಣಾಜಕನಕ ಘಟನೆ ಮೀರತ್ನಲ್ಲಿ ನಡೆದಿದೆ. ಮೆಡಿಕಲ್ ಕಾಲೇಜಿನಿಂದ ಮಗು ಕಳುವಾಗಿದೆ ಎಂಬ ವಿಚಾರ ಕೋಲಾಹಲ ಸೃಷ್ಟಿಸಿದ್ದು, ತಂದೆಯೇ ಮಗುವನ್ನು ಮಾರಿದ ಘಟನೆ ಬಯಲಾಗಿದೆ.
ಪ್ರಕರಣದ ವಿವರ: ಇಲ್ಲಿನ ಲಾಲಾ ಲಜಪತ್ ರಾಯ್ ವೈದ್ಯಕೀಯ ಕಾಲೇಜಿನ ಹೆರಿಗೆ ವಾರ್ಡ್‌ನಲ್ಲಿ ಗರ್ಭಿಣಿ ಮಹಿಳೆಯೊಬ್ಬಳು ಸೋಮವಾರ ದಾಖಲಾಗಿದ್ದರು. ಅಂದು ತಡರಾತ್ರಿ ಮಹಿಳೆಗೆ ಹೆರಿಗೆಯಾಗಿದೆ. ಆದರೆ, ಮಗು ಹುಟ್ಟಿದ ಕೆಲವೇ ಗಂಟೆಗಳಲ್ಲಿ ತಂದೆಯೇ ಮಗುವನ್ನು ಬೇರೊಬ್ಬ ದಂಪತಿಗೆ ಹಸ್ತಾಂತರಿಸಿದ್ದಾನೆ. ಮಗುವನ್ನು ನೀಡಿದ್ದಕ್ಕಾಗಿ ಆತ 1 ಲಕ್ಷ ರೂಪಾಯಿ ಹಣವನ್ನು ಆ ದಂಪತಿಯಿಂದ ಪಡೆದುಕೊಂಡಿದ್ದಾನೆ. ಅಲ್ಲದೇ ಈ ಹಣದಲ್ಲಿ ಕೆಲ ಭಾಗವನ್ನು ಆತ ಕೂಡಲೇ ಖರ್ಚು ಮಾಡಿದ್ದಾನೆ.
ಆದರೆ, ಈ ಮಧ್ಯೆ ವೈದ್ಯಕೀಯ ಕಾಲೇಜಿನಲ್ಲಿ ಮಗುವಿನ ಕಳ್ಳತನವಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದು ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಬಂದಿದ್ದರು. ಪೊಲೀಸರು ಸರಿಯಾಗಿ ವಿಚಾರಿಸಿದಾಗ ಮಗುವನ್ನು ಮಾರಾಟ ಮಾಡಿದ ತಂದೆಯ ಕೃತ್ಯ ಬಯಲಿಗೆ ಬಂದಿದೆ. ಆತನ ಬಳಿ 82 ಸಾವಿರ ರೂಪಾಯಿ ಹಣ ಕೂಡ ಪತ್ತೆಯಾಗಿದೆ.
ಮಗುವಿನ ತಾಯಿಯ ಪ್ರಕಾರ, ಮಗು ಹುಟ್ಟುವ ಮೊದಲೇ ಅದನ್ನು ಮಾರಾಟ ಮಾಡುವ ಒಪ್ಪಂದವಾಗಿತ್ತಂತೆ. ಶಿಶು ಗಂಡಾಗಿದ್ದರೆ 1 ಲಕ್ಷ ರೂಪಾಯಿಗೆ ಮಾರಾಟದ ಒಪ್ಪಂದವಾಗಿದ್ದು, ಇದಕ್ಕೆ ತಾಯಿಯೂ ಒಪ್ಪಿದ್ದಳು. ಇದರ ಪ್ರಕಾರವೇ ಎಲ್ಲವೂ ನಡೆದಿತ್ತು. ಆದರೆ ಮಗುವಿನ ಕಳುವಾಗಿದೆ ಎಂಬ ಆರೋಪ ಕೇಳಿ ಬಂದ ನಂತರ ಮಗು ಮಾರಾಟ ಕೃತ್ಯ ಬಯಲಾಗಿದೆ.
ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಹೇಗೆ ಪ್ರಕರಣ ದಾಖಲಿಸಬೇಂಬ ಗೊಂದಲದಲ್ಲಿ ಪೊಲೀಸರಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ದುಡ್ಡಿನಾಸೆಗೆ ಮಗು ಮಾರಿದ ತಂದೆ, ಕಂದನಿಗಾಗಿ ತಾಯಿ ಹಂಬಲ