ಶ್ರೀನಗರ(ಜಮ್ಮು ಕಾಶ್ಮೀರ): ಭಯೋತ್ಪಾದಕರ ಹಾವಳಿಯ ಹೊರತಾಗಿ ಜಮ್ಮು ಕಾಶ್ಮೀರದಲ್ಲಿ ಮತ್ತೊಂದು ಸಮಸ್ಯೆ ಕಾಣಿಸಿಕೊಂಡಿದೆ. ಕೋವಿಡ್ನಿಂದ ಅನಾಥರಾದ ಮಕ್ಕಳನ್ನು ಕಾನೂನುಬಾಹಿರವಾಗಿ ದತ್ತು ನೀಡುವಿಕೆ ಮತ್ತು ಮಾರಾಟ ಮಾಡುತ್ತಿರುವ ಆರೋಪ ಇದಾಗಿದೆ.
ಕೋವಿಡ್ನಿಂದ ತಂದೆ, ತಾಯಿಯನ್ನು ಕಳೆದುಕೊಂಡು ಸಾಕಷ್ಟು ಮಕ್ಕಳು ಅನಾಥರಾಗಿದ್ದಾರೆ. ಅಂಥವರನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸರ್ಕಾರೇತರ ಸಂಘಟನೆಯೊಂದರ ದಂಧೆಯ ಕುರಿತು ಆನ್‌ಲೈನ್ ಸುದ್ದಿ ಮಾಧ್ಯಮವೊಂದು ವರದಿ ಮಾಡಿತ್ತು.
ಈ ವರದಿ ಆಧರಿಸಿ ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀರದ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ನಿರ್ದೇಶಕಿ ಶಬ್ನಮ್ ಕಾಮಿಲಿ, ಸರ್ಕಾರೇತರ ಸಂಘಟನೆಯ ಇಬ್ಬರ ವಿರುದ್ಧ ದೂರು ದಾಖಲಿಸಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ತಿಳಿಸಿದ್ದಾರೆ. ಪಾಂಪೋರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣ ಕುರಿತಂತೆ ಇರುವ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶೀತಲ್ ನಂದಾ ಅವರು ಕಾಶ್ಮೀರದ ಐಜಿಪಿ ಅವರಿಗೆ ಸೂಚನೆ ನೀಡಿದ್ದಾರೆ.
ಈಗಾಗಲೇ ಇಲಾಖೆಯಿಂದ ಗುರುತಿಸಲ್ಪಟ್ಟಿರುವ ಅನಾಥರನ್ನು ಹಾಗೂ ಭಾರತ ಸರ್ಕಾರದ ವಿವಿಧ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಅಪ್‌ಲೋಡ್ ಮಾಡಲಾದ ಅನಾಥ ಮಕ್ಕಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಗೆ ವರದಿ ಸಲ್ಲಿಸುವಂತೆ ಶಬ್ನಮ್ ಕಾಮಿಲಿ ಮಕ್ಕಳ ಕಲ್ಯಾಣ ಸಮಿತಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಮಹಿಳಾ ಕಾನ್ಸ್ಟೇಬಲ್ 'ಪುರುಷ'ನಾಗಿ ಬದಲಾಗಲು ಅನುಮತಿ ನೀಡಿದ ರಾಜ್ಯ ಸರ್ಕಾರ