ಭರತ್‌ಪುರ (ರಾಜಸ್ಥಾನ): ರಾಜಸ್ಥಾನದಲ್ಲಿ ಸೈನಿ ಸಮಾಜ ಮೀಸಲಾತಿ ಹೋರಾಟಗಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಮೃತರನ್ನು ಮೋಹನ್ ಸೈನಿ ಎಂದು ಗುರುತಿಸಲಾಗಿದ್ದು, ಮೀಸಲಾತಿ ಹೋರಾಟ ಸ್ಥಳವಾದ ಭರತ್‌ಪುರ ಜಿಲ್ಲೆಯ ಅರೋರಾದಲ್ಲಿ ಘಟನೆ ಜರುಗಿದೆ.
ಸೈನಿ ಸಮಾಜ ಆರಕ್ಷಣ್ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಏಪ್ರಿಲ್ 21ರಿಂದ ಅರೋರಾ ಬಳಿಯ ಜೈಪುರ ಆಗ್ರಾ ಹೆದ್ದಾರಿಯಲ್ಲಿ ಮೀಸಲಾತಿ ಚಳವಳಿ ಆರಂಭಿಸಲಾಗಿದೆ. ಈ ಚಳವಳಿಯಲ್ಲಿ ಪಾಲ್ಗೊಂಡಿದ್ದ ಯುವಕ ಹೋರಾಟಗಾರ ಮೋಹನ್ ಸೈನಿ ಶವ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಪ್ರತಿಭಟನಾನಿರತ ಸೈನಿ ಸಮಾಜದ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆದರೆ, ಈ ವೇಳೆ ಸಮಾಜದ ಮೀಸಲಾತಿ ಬೇಡಿಕೆಯನ್ನು ಒಪ್ಪಿಕೊಳ್ಳುವವರೆಗೆ ಮೃತದೇಹವನ್ನು ಮಟ್ಟಲು ಬಿಡುವುದಿಲ್ಲ ಎಂದು ಕುಟುಂಬಸ್ಥರು ಮತ್ತು ಪ್ರತಿಭಟನಾನಿರತರು ಪಟ್ಟು ಹಿಡಿದರು. ಆಗ ಪೊಲೀಸರು ಮನವೊಲಿಸಿ ಮೃತದೇಹವನ್ನು ಆರ್‌ಬಿಎಂ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು.
ಮತ್ತೊಂದೆಡೆ, "ಜ್ಯೋತಿರಾವ್ ಫುಲೆ ಅಮರರಾಗಿದ್ದಾರೆ. ನಾವು ಶೇ.12ರಷ್ಟು ಮೀಸಲಾತಿಯನ್ನು ಪಡೆದೇ ಪಡೆದುಕೊಳ್ಳುತ್ತೇವೆ'' ಎಂದು ಮೃತ ಮೋಹನ್ ಸೈನಿ ಸಾವಿಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ಪೊಲೀಸರು ದೃಢಪಡಿಸಿಲ್ಲ. ಇದೇ ಸಮಯದಲ್ಲಿ ಸೈನಿ ಸಮುದಾಯದ ಮುಖಂಡರು ಮತ್ತು ಯುವಕರು ಮೋಹನ್ ಸೈನಿ ಸಾವು ಖಂಡಿಸಿ ಮತ್ತು ಮೀಸಲಾತಿಗಾಗಿ ಆಗ್ರಹಿಸಿ ಆರ್‌ಬಿಎಂ ಆಸ್ಪತ್ರೆಯಿಂದ ಜಾಥಾ ನಡೆಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿದರು.
ಸೈನಿ ಸಮಾಜ ಬೇಡಿಕೆ ಏನು?: ಸೈನಿ ಸಮುದಾಯಕ್ಕೆ ಶೇ.12ರಷ್ಟು ಮೀಸಲಾತಿ ನೀಡಬೇಕು. ರಾಜ್ಯ ಲವಕುಶ ಕಲ್ಯಾಣ ಮಂಡಳಿ ರಚನೆ ಹಾಗೂ ಲವಕುಶ ಹಾಸ್ಟೆಲ್ಗಳ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಇದೆಯಾಗಿದೆ. ಇದಕ್ಕೂ ಮೊದಲು ಏಪ್ರಿಲ್ 20ರಂದು ಸೈನಿ ಸಮಾಜ ಆರಕ್ಷಣ್ ಸಂಘರ್ಷ ಸಮಿತಿಯ ಸಂಚಾಲಕ ಮುರಾರಿ ಲಾಲ್ ಸೈನಿ ಸೇರಿದಂತೆ 26 ಜನರನ್ನು ಪೊಲೀಸರು ಬಂಧಿಸಿದ್ದರು.
ಆದರೆ, ಎಸ್‌ಡಿಎಂ ನ್ಯಾಯಾಲಯ ಸೋಮವಾರ, ಮುರಾರಿ ಲಾಲ್ ಸೈನಿ, ಸಮಿತಿಯ ಮುಖ್ಯ ಕಾರ್ಯದರ್ಶಿ ಬದನ್ ಸಿಂಗ್ ಕುಶ್ವಾಹಾ, ಶೈಲೇಂದ್ರ ಸಿಂಗ್ ಕುಶ್ವಾಹಾ ಮತ್ತು ನಂದ್ ಲಾಲ್ ಮಾಲಿ ಸೇರಿದಂತೆ 16 ಜನರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಬಿಡುಗಡೆಯಾದ ನಂತರ ಇವರು ಆಂದೋಲನ ಸ್ಥಳಕ್ಕೆ ಭೇಟಿ ನೀಡಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ್ದ ಮುರಾರಿ ಲಾಲ್ ಸೈನಿ, ಮೀಸಲಾತಿ ಸಂಬಂಧ ನಿಯೋಗವು ಜೈಪುರಕ್ಕೆ ಮಾತುಕತೆಗೆ ತೆರಳಿದೆ. ಇದರಿಂದ ಹೆದ್ದಾರಿಯನ್ನು ತೊರೆಯುವಂತೆ ಸೂಚಿಸಿದ್ದರು. ಆಗ ತಕ್ಷಣವೇ ಆಕ್ರೋಶಗೊಂಡ ಇತರ ಚಳವಳಿಗಾರರು ಮುರಾರಿ ಲಾಲ್ ಸೈನಿ ವಿರುದ್ಧ ಪ್ರತಿಭಟಿಸಿ, ಘೋಷಣೆಗಘಳನ್ನು ಕೂಗಿದ್ದರು. ಶೇ.12ರಷ್ಟು ಮೀಸಲಾತಿ ನೀಡುವ ಸರ್ಕಾರದ ಉದ್ದೇಶ ಸ್ಪಷ್ಟವಾಗಿಲ್ಲ. ಸರ್ಕಾರದ ಐದು ಸದಸ್ಯರ ನಿಯೋಗವು ಬೇಡಿಕೆಗಳಿಗೆ ಒಪ್ಪಿಗೆ ಪ್ರಸ್ತಾವನೆಯೊಂದಿಗೆ ಧರಣಿ ಸ್ಥಳಕ್ಕೆ ಬರುವವರೆಗೆ ಚಳವಳಿ ಸ್ಥಳವನ್ನು ಖಾಲಿ ಮಾಡುವುದಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಮಾಲ್ಡಾದಲ್ಲಿ ಅಪ್ರಾಪ್ತೆ ಶವಪತ್ತೆ.. ಅತ್ಯಾಚಾರದ ನಂತರ ಕೊಂದಿರುವ ಶಂಕೆ