ತಿರುವನಂತಪುರಂ(ಕೇರಳ): ಈ ಬಾರಿಯ ಸಂಕ್ರಾಂತಿ ಹಬ್ಬಕ್ಕೆ ಶಬರಿಮಲೆ (Shabarimala) ಯಾತ್ರಾ ಸ್ಥಳವನ್ನು ಪುನಾರಂಭಿಸಲಾಗುತ್ತಿದ್ದು, ಕೊರೊನಾ ಹರಡದಂತೆ ತಡೆಯಲು ಕೋವಿಡ್ ಮಾರ್ಗಸೂಚಿಗಳನ್ನು (Covid Guidelines) ಎಲ್ಲಾ ಯಾತ್ರಾರ್ಥಿಗಳು ಅನುಸರಿಸುವಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.
ಎರಡು ತಿಂಗಳ ಕಾಲ ಶಬರಿಮಲೆಯಲ್ಲಿ ಮಂಡಲ-ಮಕರವಿಳಕ್ಕು (ಸಂಕ್ರಾಂತಿ) ಜರುಗಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಅಯ್ಯಪ್ಪ ಸ್ವಾಮಿ ದೇವಾಲಯವನ್ನು (Ayyappa Swami temple) ತೆರೆಯಲಾಗುತ್ತದೆ. ಮಂಗಳವಾರದಿಂದ ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮಂಡಲ ಪೂಜೆಗಾಗಿ ದೇವಾಲಯವನ್ನು ಡಿಸೆಂಬರ್ 26ರವರೆಗೆ ತೆರೆದಿರಲಾಗುತ್ತದೆ. ಅದಾದ ನಂತರ ಡಿಸೆಂಬರ್ 30ರಂದು ದೇವಾಲಯವನ್ನು ಪುನರ್ ತೆರೆಯಲಾಗುತ್ತದೆ. ಜನವರಿ 20ರವರೆಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಸಚಿವೆ ವೀಣಾ ಜಾರ್ಜ್ (Kerala health minister Veena George) ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ಈ ಕುರಿತಂತೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಈ ಕುರಿತಂತೆ ವಿಶೇಷ ಸಭೆಗಳನ್ನು ಕರೆದು ಚರ್ಚೆ ನಡೆಸಲಾಗಿದೆ. ಪಂಬಾದಿಂದ ಅಯ್ಯಪ್ಪಸ್ವಾಮಿ ಸನ್ನಿಧಾನಂವರೆಗಿನ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿ, ಆರೋಗ್ಯಾಧಿಕಾರಿಗಳನ್ನು ನಿಯೋಜನೆ ಮಾಡಲಾಗುತ್ತದೆ. ಸೋಮವಾರದಿಂದ ಈ ಆರೋಗ್ಯ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಪಂಬಾದಿಂದ ಸನ್ನಿಧಾನಂವರೆಗಿನ ಐದು ಸ್ಥಳಗಳಲ್ಲಿ ತುರ್ತು ಚಿಕಿತ್ಸಾ ಕೇಂದ್ರಗಳು ಮತ್ತು ಆಕ್ಸಿಜನ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಯಾತ್ರಿಗಳಿಗೆ ಅತಿಯಾದ ಹೃದಯ ಬಡಿತ, ಉಸಿರಾಟ ತೊಂದರೆ, ಎದೆನೋವು ಮುಂತಾದ ಆರೋಗ್ಯ ಸಮಸ್ಯೆಗಳಿದ್ದರೆ, ಹತ್ತಿರದ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರು ಮತ್ತು ನರ್ಸ್ಗಳು ದಿನದ 24 ಗಂಟೆಯೂ ಸೇವೆಗೆ ಸಿದ್ಧರಾಗಿರುತ್ತಾರೆ. ಉಚಿತ ಆ್ಯಂಬುಲೆನ್ಸ್ ಸೇವೆಯೂ ಲಭ್ಯವಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಣಿಪುರ ಉಗ್ರರ ದಾಳಿ.. ಸ್ವಗ್ರಾಮಕ್ಕೆ ಬರಲಿದೆ ಅಸ್ಸಾಂ ರೈಫಲ್ಸ್ ಜವಾನ್ ಸುಮನ್ ಸ್ವರ್ಗೀಯರಿ ಪಾರ್ಥೀವ ಶರೀರ..