ಶಬರಿಮಲೆ( ಕೇರಳ) : ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಹಲವೆಡೆ ಪೊಲೀಸರ ನಿಯಂತ್ರಣ ತಪ್ಪಿದೆ ಎಂದು ವರದಿಯಾಗಿದೆ. ಶಬರಿಮಲೆಯಲ್ಲಿ ಟ್ರಾಫಿಕ್ ಜಾಮ್ ಐದನೇ ದಿನವೂ ಮುಂದುವರಿದಿದೆ. ಹೀಗಿರುವಾಗ ಅನ್ಯ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ದರ್ಶನ ಮುಗಿಸದೇ ವಾಪಸಾಗುತ್ತಿರುವ ಬಗ್ಗೆಯೂ ವರದಿಯಾಗಿದೆ.
ಗಂಟೆಗಟ್ಟಲೆ ಕಾದರೂ ಭಕ್ತರಿಗೆ ದರ್ಶನ ಸಿಗದೇ ಇದ್ದಾಗ ಬೆಟ್ಟದಿಂದ ಇಳಿದು ಪಂದಳಂನ ವಲಿಯಾ ಕೋಯಿಕಲ್ ಶ್ರೀ ಧರ್ಮಶಾಸ್ತಾ ದೇವಸ್ಥಾನಕ್ಕೆ ಬಂದು, ತುಪ್ಪದ ಅಭಿಷೇಕದೊಂದಿಗೆ ಶಬರಿಮಲೆಯಂತೆಯೇ ಪೂಜೆ ಸಲ್ಲಿಸಿ, ತಮ್ಮ ರಾಜ್ಯಗಳಿಗೆ ಮರಳುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಕರ್ನಾಟಕದಿಂದ ಬಂದಿದ್ದ ಅಯ್ಯಪ್ಪ ಭಕ್ತರ ತಂಡ ಕಳೆದ ದಿನ ಪಂದಳಂನ ವಲಿಯಾಕೋಯಿಕಲ್ ಶ್ರೀ ಧರ್ಮ ಶಾಸ್ತಾ ದೇವಸ್ಥಾನಕ್ಕೆ ಆಗಮಿಸಿ, ಗಂಟು ಬಿಚ್ಚಿಕೊಂಡು ತುಪ್ಪದ ಅಭಿಷೇಕ ನೆರವೇರಿಸಿ ವಾಪಸ್ ಆದರು. ಅನೇಕ ಅಯ್ಯಪ್ಪ ಭಕ್ತರು ಪಂದಳಂ ದೇವಸ್ಥಾನಕ್ಕೆ ಭೇಟಿ ನೀಡಿ, ತುಪ್ಪದ ಅಭಿಷೇಕ ಮಾಡಿ ಹಿಂತಿರುಗುತ್ತಾರೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಕೋವಿಡ್ ಅವಧಿಯಲ್ಲಿ ಭಕ್ತರು ದೇವಸ್ಥಾನಕ್ಕೆ ಬಂದು ತಮ್ಮ ಗಂಟುಗಳನ್ನು ಬಿಚ್ಚುವ ಮೂಲಕ ತುಪ್ಪದ 'ಅಭಿಷೇಕ' ಮಾಡಿದರು. ಆದರೆ ಈಗ ಶಬರಿಮಲೆಯಲ್ಲಿ ಜನಜಂಗುಳಿ ಇರುವುದರಿಂದ ಬೆಟ್ಟದಿಂದ ಇಳಿದು ಪಂದಳಂ ದೇವಸ್ಥಾನಕ್ಕೆ ಆಗಮಿಸಿ, ತುಪ್ಪ ಅಭಿಷೇಕ ಮಾಡುವ ಭಕ್ತರ (12.12.23) ವಾಹನ ದಟ್ಟಣೆಯಲ್ಲಿ ಕೊಂಚ ಇಳಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಟ್ರಾಫಿಕ್ ಜಾಮ್ ಕಡಿಮೆಯಾಗಿಲ್ಲ. ಶಬರಿಮಲೆ ರಸ್ತೆಯಲ್ಲಿ ಸತತ ಐದನೇ ದಿನವೂ ವಾಹನಗಳ ಉದ್ದನೆಯ ಸರತಿ ಸಾಲು ಕಂಡು ಬರುತ್ತಿದೆ. ಭಕ್ತರ ಸಂಕಷ್ಟವನ್ನು ಮುಂದಿಟ್ಟುಕೊಂಡು ವಿವಿಧೆಡೆ ಪ್ರತಿಭಟನೆ ನಡೆಸಲಾಗುತ್ತಿದೆ. ಪಂಪಾ ತಲುಪಿ ಹಿಂತಿರುಗುವುದು ತುಂಬಾ ಕಷ್ಟವಾಗಿದೆ ಎನ್ನುತ್ತಾರೆ ಭಕ್ತರು. ದಟ್ಟಣೆ ನಿಯಂತ್ರಣದ ಭಾಗವಾಗಿ ಪಂಪಾ ಪ್ರವೇಶಿಸಲು ಕೆಲವೇ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂಬುದು ತಿಳಿದು ಬಂದಿದೆ.
ದೇವಸ್ವಂ ಮಂಡಳಿ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ: ಯುವ ಕಾಂಗ್ರೆಸ್ ಕಾರ್ಯಕರ್ತರು ತಿರುವನಂತಪುರಂನಲ್ಲಿರುವ ದೇವಸ್ವಂ ಮಂಡಳಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿದರು. ಇಂದು (12.12.23) ಬೆಳಗ್ಗೆ 10:50ರ ಸುಮಾರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ನಂದನ್‌ನಲ್ಲಿರುವ ದೇವಸ್ವಂ ಬೋರ್ಡ್ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಿದರು. ಯಾತ್ರಾರ್ಥಿಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ಹಾಗೂ ಶಬರಿಮಲೆಯಲ್ಲಿ ಜನಸಂದಣಿ ನಿಯಂತ್ರಿಸುವಲ್ಲಿ ದೇವಸ್ವಂ ಮಂಡಳಿ ಸಂಪೂರ್ಣ ವಿಫಲವಾಗಿದೆ ಎಂದು ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ಶಬರಿಮಲೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ಅವರು ಹೇಳಿದರು. ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಒಂದೆಡೆ ಸೇರಿದ ದಿನದಂದು ಬಿಕ್ಕಟ್ಟು ಉಲ್ಬಣಗೊಂಡಿತು. ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಭಕ್ತರು ಅನಿಯಂತ್ರಿತವಾಗಿ ಆಗಮಿಸಿದಾಗ ಸಮಸ್ಯೆಗಳು ಸಹಜ ಎಂದು ಸಚಿವರು ಹೇಳಿದರು. ದರ್ಶನದ ಸಮಯವನ್ನು ಒಂದು ಗಂಟೆಗೆ ಮಿತಿಗೊಳಿಸಲಾಗಿದ್ದು, ಭಕ್ತರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಬೇಕು ಎಂದು ದೇವಸ್ವಂ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: 'ಹರಿವರಾಸನಂ' ಆಚರಣೆ: ಭಕ್ತರಿಂದ ತುಂಬಿ ತುಳುಕುತ್ತಿದೆ ಶಬರಿಮಲೆ- ವಿಡಿಯೋ