ಮುಂಬೈ(ಮಹಾರಾಷ್ಟ್ರ): ರಾಜ್ಯದ ಸ್ಥಿತಿ ತುರ್ತು ಪರಿಸ್ಥಿತಿಯಂತೆ ಇದೆ ಎಂದು ಮಹಾರಾಷ್ಟ್ರದಲ್ಲಿರುವ ಭಾರತೀಯ ಜನತಾ ಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ. ಅವರಿಗೆ ಕೇಂದ್ರ ನಾಯಕರೂ ಕೂಡಾ ಬೆಂಬಲ ನೀಡುತ್ತಿದ್ದಾರೆ ಎಂದು ಶಿವಸೇನೆಯ ಸಾಮ್ನಾ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಹೇಳಿದೆ.
ಒಂದು ಕಾಲದಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಉಪಯೋಗವಿಲ್ಲದ ಹುಲ್ಲು ಎಂದು ಹೇಳುತ್ತಿತ್ತು. ಆದರೆ ಈಗ ಬಿಜೆಪಿ ಪಕ್ಷವೇ ಅತ್ಯಂತ ತೊಂದರೆ ನೀಡುವ ಹುಲ್ಲಾಗಿ ಬೆಳೆದಿದೆ. ಅದೇ ಹುಲ್ಲಿನ ಕಷಾಯ ಮಾಡಿ ಬಿಜೆಪಿ ನಾಯಕರು ದಿನಕ್ಕೆ ಎರಡು ಬಾರಿ ಕುಡಿಯುತ್ತಾರೆ ಎಂದು ಸಂಪಾದಕೀಯದಲ್ಲಿ ಟೀಕಿಸಲಾಗಿದೆ.
ಸುದ್ದಿ ವಾಹಿನಿಯ ಮಾಲೀಕ ಅರ್ನಾಬ್ ಗೋಸ್ವಾಮಿ ಅವರನ್ನು ಖಾಸಗಿ ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರ ಬಂಧನವು ರಾಜಕಾರಣಿಗಳು ಮತ್ತು ಪತ್ರಕರ್ತರಿಗೆ ಸಂಬಂಧಿಸಿಲ್ಲ. ಎರಡು ವರ್ಷಗಳ ಹಿಂದೆ ಅಲಿಬಾಗ್ ನಿವಾಸಿ ಅನ್ವಯ್ ನಾಯಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ. ಸರ್ಕಾರ ಅವರನ್ನು ಬಂಧಿಸಿಲ್ಲ ಎಂದು ಪತ್ರಿಕೆ ಸ್ಪಷನೆ ನೀಡಿದೆ.
ನಾಯಕ್ ಅವರು ಆತ್ಮಹತ್ಯೆಗೆ ಶರಣಾಗುವ ಮೊದಲು ಬರೆದ ಪತ್ರದಲ್ಲಿ ಅರ್ನಬ್ ಗೋಸ್ವಾಮಿಯಿಂದ ತನಗೆ ಹಣಕಾಸಿನ ವ್ಯವಹಾರದಲ್ಲಾದ ವಂಚನೆಯ ಕುರಿತು ಬರೆದಿದ್ದರು. ಅದೇ ಕಾರಣದಿಂದ ತಾಯಿ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡರು. ಆದರೆ, ಹಿಂದಿನ ಸರ್ಕಾರವು ಗೋಸ್ವಾಮಿಯನ್ನು ರಕ್ಷಿಸಿತ್ತು. ಪೊಲೀಸರು ಮತ್ತು ನ್ಯಾಯಾಲಯದ ಮೇಲೆ ಒತ್ತಡ ಹೇರಲಾಗಿತ್ತು ಎಂದು ಸಂಪಾದಕೀಯದಲ್ಲಿ ಆರೋಪಿಸಲಾಗಿದೆ.
ತನ್ನ ಗಂಡನ ಸಾವಿನ ಕುರಿತು ಹೊಸದಾಗಿ ತನಿಖೆ ನಡೆಸಲು ನಾಯಕ್ ಅವರ ಪತ್ನಿ ಪೊಲೀಸ್ ಮತ್ತು ನ್ಯಾಯಾಲಯಕ್ಕೆ ಅರ್ಜಿ ನೀಡಿದ್ದಾರೆ. ಕಾನೂನಿನ ಪ್ರಕಾರ ಅರ್ನಾಬ್ ಗೋಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರ ಪತ್ನಿಯ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಈಗ ತನಿಖೆಯಲ್ಲಿ ಸತ್ಯ ಹೊರಬರಲಿದೆ ಎಂದು ಬರೆಯಲಾಗಿದೆ.