ನವದೆಹಲಿ: ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಇಂದಿನಿಂದ ತಮ್ಮ ಎರಡು ದಿನಗಳ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.
ದ್ವಿಪಕ್ಷೀಯ ಮಾತುಕತೆ ಮತ್ತು ವರ್ಷದ ಕೊನೆಯಲ್ಲಿ ಬಾಕಿ ಇರುವ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯ ದ್ವಿಪಕ್ಷೀಯ ಸಂಬಂಧಗಳ ಅಂಶಗಳನ್ನು ಚರ್ಚಿಸಲು, ಸಿದ್ಧತೆಗಳನ್ನು ಪರಿಶೀಲಿಸಲು ಇದು ಅವಕಾಶವನ್ನು ನೀಡುತ್ತದೆ.
"ಏಪ್ರಿಲ್ 5-6 ರಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ನವದೆಹಲಿಯಲ್ಲಿ ಅವರು ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ ಅವರು, "ಈ ಭೇಟಿಯು ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಅಂಶಗಳನ್ನು ಚರ್ಚಿಸಲು ಒಂದು ಅನನ್ಯ ಅವಕಾಶವಾಗಲಿದೆ. ಮುಂಬರುವ ಭಾರತ ರಷ್ಯಾ ವಾರ್ಷಿಕ ಶೃಂಗಸಭೆಯ ಸಿದ್ಧತೆಗಳನ್ನು ಪರಿಶೀಲಿಸಲು ಮತ್ತು ಪ್ರಾದೇಶಿಕ-ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆಯೂ ಚರ್ಚಿಸಲು ಸಹಕಾರಿಯಾಲಿದೆ" ಎಂದಿದ್ದಾರೆ.
ಇದನ್ನೂ ಓದಿ: 92 ಬಾರಿ ಸೋತರೂ ಕುಗ್ಗದ ಉತ್ಸಾಹ: ಮತ್ತೆ ನಾಮಪತ್ರ ಸಲ್ಲಿಸಿದ 'ಹಸನುರಾಮ್'
ಭಾರತದ ರಷ್ಯಾ ರಾಯಭಾರ ಕಚೇರಿಯ ಹೇಳಿಕೆಯ ಪ್ರಕಾರ, "ವಿದೇಶಾಂಗ ವ್ಯವಹಾರಗಳ ಏಜೆನ್ಸಿಗಳ ಮುಖ್ಯಸ್ಥರು ಪ್ರಸ್ತುತ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಲಿದ್ದಾರೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸಹಕಾರ ಸೇರಿದಂತೆ ಈ ವರ್ಷ ಉನ್ನತ ಮಟ್ಟದ ಸಭೆಯ ಸಿದ್ಧತೆ ಬಗ್ಗೆಯೂ ಮಾತುಕತೆ ನಡೆಯಲಿದೆ. ಪ್ರಾದೇಶಿಕ, ಜಾಗತಿಕ ಕಾರ್ಯಸೂಚಿಯಲ್ಲಿನ ಪ್ರಮುಖ ವಿಷಯಗಳನ್ನು ಪರಿಗಣಿಸಿ ಯುಎನ್, ಬ್ರಿಕ್ಸ್ ಸೇರಿದಂತೆ ಅಂತಾರಾಷ್ಟ್ರೀಯ ರಂಗದಲ್ಲಿ ರಷ್ಯಾ ಮತ್ತು ಭಾರತದ ನಡುವಿನ ಪರಸ್ಪರ ಕಾರ್ಯ ವಿಧಾನಗಳನ್ನು ನಿರ್ಣಯಿಸಲಾಗುತ್ತದೆ" ಎಂದಿದೆ.
ಭಾರತದ ನಂತರ, ಲಾವ್ರೊವ್ ಏಪ್ರಿಲ್ 6-7 ರಿಂದ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ.