ಮುಂಬೈ: ಗುರುವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ 4 ಪೈಸೆ ಕುಸಿದು 81.66 ಕ್ಕೆ ತಲುಪಿದೆ. ಏರುತ್ತಿರುವ ಕಚ್ಚಾ ತೈಲ ಬೆಲೆಗಳ ಕಾರಣದಿಂದ ರೂಪಾಯಿ ಮೌಲ್ಯದಲ್ಲಿ ಹೆಚ್ಚಿನ ಏರಿಳಿತ ಉಂಟಾಗುತ್ತಿದೆ. ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿಯು ಡಾಲರ್ ವಿರುದ್ಧ 81.52 ರಲ್ಲಿ ಪ್ರಬಲವಾಗಿ ವಹಿವಾಟು ಆರಂಭಿಸಿತು. ನಂತರ ಲಾಭ ಕಳೆದುಕೊಂಡು 81.66 ಗೆ ಕುಸಿಯಿತು. ಹಿಂದಿನ ಮುಕ್ತಾಯಕ್ಕಿಂತ 4 ಪೈಸೆ ಕುಸಿತ ದಾಖಲಿಸಿತು. ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಕರೆನ್ಸಿ ಎದುರು ರೂಪಾಯಿ 81.51 ಕ್ಕೆ ತಲುಪಿತ್ತು.
ಮಂಗಳವಾರ ರೂಪಾಯಿ ಮೌಲ್ಯ 20 ಪೈಸೆಗಳಷ್ಟು ಏರಿಕೆಯಾಗಿದ್ದು ಯುಎಸ್ ಡಾಲರ್ ಎದುರು 81.62 ಕ್ಕೆ ಕೊನೆಗೊಂಡಿತ್ತು. ದಸರಾ ನಿಮಿತ್ತ ಬುಧವಾರ ವಿದೇಶಿ ವಿನಿಮಯ ಮಾರುಕಟ್ಟೆಯನ್ನು ಮುಚ್ಚಲಾಗಿತ್ತು.
ರಿಲಯನ್ಸ್ ಸೆಕ್ಯುರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಶ್ರೀರಾಮ್ ಅಯ್ಯರ್ ಪ್ರಕಾರ, ಕಳೆದ ಎರಡು ಸೆಷನ್‌ಗಳಲ್ಲಿ ಡಾಲರ್ ಕುಸಿತದ ಹಿನ್ನೆಲೆಯಲ್ಲಿ ರೂಪಾಯಿ ಬಲವಾಗಿತ್ತು. ಇದಲ್ಲದೆ, ಏಷ್ಯನ್ ಮತ್ತು ಉದಯೋನ್ಮುಖ ಮಾರುಕಟ್ಟೆಗಳ ಕರೆನ್ಸಿಗಳು ಸಹ ಈ ಗುರುವಾರ ಬೆಳಗ್ಗೆ ಪ್ರಬಲವಾಗಿವೆ.
ಆರು ಕರೆನ್ಸಿಗಳ ಗುಚ್ಛದ ವಿರುದ್ಧ ಡಾಲರ್ ಬಲ ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.35 ರಷ್ಟು ಕುಸಿದು 110.81 ಕ್ಕೆ ತಲುಪಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ ಶೇ 0.13 ಅಂದರೆ USD 93.49 ಕ್ಕೆ ಏರಿತು.
ದೇಶಿಯ ಈಕ್ವಿಟಿ ಮಾರುಕಟ್ಟೆಯಲ್ಲಿ 30-ಶೇರು ಬಿಎಸ್‌ಇ ಸೆನ್ಸೆಕ್ಸ್ 357.3 ಪಾಯಿಂಟ್ ಅಥವಾ 0.62 ರಷ್ಟು ಏರಿಕೆಯಾಗಿ 58,422.77 ಕ್ಕೆ ವಹಿವಾಟು ನಡೆಸುತ್ತಿದೆ. ಆದರೆ ವಿಶಾಲವಾದ ಎನ್‌ಎಸ್‌ಇ ನಿಫ್ಟಿ 109.25 ಪಾಯಿಂಟ್ ಅಥವಾ 0.63 ರಷ್ಟು ಮುನ್ನಡೆ ಸಾಧಿಸಿ 17,383.55 ಕ್ಕೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರದಂದು ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಖರೀದಿದಾರರಾಗಿದ್ದು, ವಿನಿಮಯ ಅಂಕಿಅಂಶಗಳ ಪ್ರಕಾರ ಅವರು 1,344.63 ಕೋಟಿ ರೂಪಾಯಿ ಮೌಲ್ಯದ ಶೇರುಗಳನ್ನು ಖರೀದಿಸಿದ್ದಾರೆ.
ಇದನ್ನೂ ಓದಿ: ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ಅಮೆಜಾನ್ಗೆ 33 ಲಕ್ಷ ಡಾಲರ್ ದಂಡ