ಪಾಟ್ನಾ(ಬಿಹಾರ) : ಬಿಹಾರದಲ್ಲಿ ಮದ್ಯಪಾನ ಸಂಪೂರ್ಣ ನಿಷೇಧ ಮಾಡಲಾಗಿದೆ. ಇದರ ಮಧ್ಯೆ ಕಳ್ಳಬಟ್ಟಿ ತಯಾರಿಕೆ ಕೆಲಸ ಜೋರಾಗಿದೆ. ಅದರ ಸೇವನೆ ಮಾಡಿ ನೂರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿವೆ. ಇವೆಲ್ಲದರ ಮಧ್ಯೆ ಇದೀಗ ನಿತೀಶ್ ಕುಮಾರ್ ಸರ್ಕಾರ ಇದಕ್ಕೆ ಬ್ರೇಕ್ ಹಾಕಲು ಮತ್ತೊಂದು ವಿಭಿನ್ನ ನಿರ್ಧಾರ ಕೈಗೊಂಡಿದೆ.
ಮದ್ಯಪಾನ ಮಾಡಿ ಇನ್ಮುಂದೆ ಬಿಹಾರದಲ್ಲಿ ಸಿಕ್ಕಿಬಿದ್ದರೆ ಅವರನ್ನ ಜೈಲಿಗೆ ಕಳುಹಿಸುವ ಬದಲಿಗೆ ಲಿಕ್ಕರ್ ಮಾಫಿಯಾದ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ನಡೆದ ಸಚಿವ ಸಂಪುಟದಲ್ಲಿ ಇಂತಹದೊಂದು ತೀರ್ಮಾನ ಕೈಗೊಂಡಿರುವುದಾಗಿ ಅಬಕಾರಿ ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: ರಷ್ಯಾ-ಉಕ್ರೇನ್ ಮಧ್ಯೆ ಬೆಲಾರಸ್ನಲ್ಲಿ ಶಾಂತಿ ಮಾತುಕತೆ.. ಕದನ ವಿರಾಮ ಘೋಷಣೆಗೆ ಉಕ್ರೇನ್ ಒತ್ತಾಯ
ಯಾವ ಕಾರಣಕ್ಕಾಗಿ ಈ ನಿರ್ಧಾರ?: ಬಿಹಾರದಲ್ಲಿ ಮದ್ಯಪಾನ ಮಾರಾಟ ನಿಷೇಧ ಮಾಡಿದಾಗಿನಿಂದಲೂ ಕಳ್ಳಬಟ್ಟಿ, ಅಕ್ರಮ ಮದ್ಯಪಾನ ಸೇವನೆ ಮಾಡಿ ಅನೇಕರು ಸಿಕ್ಕಿಬಿದ್ದಿದ್ದು, ಇವರನ್ನೆಲ್ಲ ಜೈಲಿಗೆ ಕಳುಹಿಸಲಾಗಿದೆ. ಹೀಗಾಗಿ, ಬಿಹಾರ ಜೈಲುಗಳಲ್ಲಿ ಕುಡುಕರ ಸಂಖ್ಯೆ ಹೆಚ್ಚಳವಾಗಿದೆ. ಇದೇ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಜನವರಿ 2021ರಿಂದ ಅಕ್ಟೋಬರ್ 2021ರವರೆಗೆ ರಾಜ್ಯದಲ್ಲಿ ದಾಳಿ ನಡೆಸಿ, ಮದ್ಯಪಾನ ಮಾಡಿರುವ 49,900 ಜನರನ್ನ ಬಂಧನ ಮಾಡಲಾಗಿದ್ದು, ಅವರನ್ನೆಲ್ಲ ಜೈಲಿಗೆ ಕಳುಹಿಸಲಾಗಿದೆ. ಇದೀಗ ಮದ್ಯಪಾನ ಸೇವನೆ ಮಾಡಿ ಸಿಕ್ಕಿಬೀಳುವವರನ್ನ ಜೈಲಿಗೆ ಕಳುಹಿಸುವ ಬದಲಾಗಿ ಇಂತಹದೊಂದು ಜವಾಬ್ದಾರಿ ನೀಡಲು ಸರ್ಕಾರ ಮುಂದಾಗಿದೆ.