ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸಮಾಜವಾದಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಇತ್ತೀಚೆಗೆ ನಿಧನರಾದ ಅನೇಕರಿಗೆ ಗೌರವ ನಮನ ಸಲ್ಲಿಸಲಾಗಿದೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸಭೆ ನಡೆಯುತ್ತಿದೆ. ಇತ್ತೀಚೆಗೆ ನಿಧನರಾದ ಮುಲಾಯಂ ಸಿಂಗ್, ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ, ಹಿಂದೂ ದಾರ್ಶನಿಕ ಆಚಾರ್ಯ ಧರ್ಮೇಂದ್ರ, ಮಾಜಿ ಮುಖ್ಯ ನ್ಯಾಯಮೂರ್ತಿ ಆರ್.ಸಿ.ಲಾಹೋಟಿ, ಹಾಸ್ಯನಟ ರಾಜು ಶ್ರೀವಾಸ್ತವ, ಕೈಗಾರಿಕೋದ್ಯಮಿ ಸೈರಸ್ ಮಿಸ್ತ್ರಿ ಮತ್ತು ಪುರಾತತ್ವಶಾಸ್ತ್ರಜ್ಞ ಬಿ.ಬಿ.ಲಾಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಾಲ್ಕು ದಿನಗಳ ಈ ಸಭೆಯಲ್ಲಿ ಆರ್‌ಎಸ್‌ಎಸ್‌ನ ಶತಮಾನೋತ್ಸವದ ಸೇರಿ ಪ್ರಚಲಿತ ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಗುತ್ತದೆ.
ನಾಗ್ಪುರದಲ್ಲಿ ವಿಜಯ ದಶಮಿ ದಿನದಂದು ಭಾಗವತ್ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಮಾತೃಭಾಷೆಯಲ್ಲಿ ಶಿಕ್ಷಣ, ಜನಸಂಖ್ಯಾ ಅಸಮತೋಲನ ಮತ್ತು ಸಾಮಾಜಿಕ ಸಾಮರಸ್ಯದ ಬಗ್ಗೆಯೂ ಚರ್ಚೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಎರಡು ಗುಂಪುಗಳ ನಡುವೆ ಘರ್ಷಣೆ: ಬಜರಂಗ ದಳದ ಕಾರ್ಯಕರ್ತ ಸಾವು