ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯಸಭೆ ಚುನಾವಣೆ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಬಿಜೆಪಿ ಹೆಚ್ಚು ಸ್ಥಾನಗಳನ್ನು ಜಯಿಸುವ ಮೂಲಕ ಮೇಲ್ಮನೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 15 ರಾಜ್ಯಗಳ 57 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಆದ್ರೆ 11 ರಾಜ್ಯಗಳಲ್ಲಿ ಒಟ್ಟು 41 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 16 ಸ್ಥಾನಗಳಿಗೆ ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಶುಕ್ರವಾರ ನಡೆಯಿತು.
ಶುಕ್ರವಾದ ನಡೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 3, ಕಾಂಗ್ರೆಸ್ 1 ಸ್ಥಾನ ಗೆದ್ದಿದೆ. ಇನ್ನು ರಾಜಸ್ಥಾನದಲ್ಲಿ 3 ಕಾಂಗ್ರೆಸ್, 1 ಬಿಜೆಪಿ ಜಯಿಸಿದೆ. ಹರಿಯಾಣದಲ್ಲಿ ಬಿಜೆಪಿ ಮತ್ತು ಪಕ್ಷೇತರ ತಲಾ 1 ಸ್ಥಾನ ಪಡೆದುಕೊಂಡಿದ್ದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ 3 ಸ್ಥಾನ, ಎನ್ಸಿಪಿ, ಶಿವಸೇನಾ ಮತ್ತು ಕಾಂಗ್ರೆಸ್ ತಲಾ 1 ಸ್ಥಾನ ಗೆದ್ದಿವೆ. ಈ ಮೂಲಕ 16 ಸ್ಥಾನಗಳಲ್ಲಿ ಬಿಜೆಪಿ 8 ಸ್ಥಾನಗಳಲ್ಲಿ ಜಯಿಸಿ ಮೇಲುಗೈ ಸಾಧಿಸಿದೆ.
ಬಿಜೆಪಿಗೆ ಸಿಂಹಪಾಲು: ರಾಜ್ಯಸಭೆಯ 57 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನ ಪಡೆದು ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 15 ಸ್ಥಾನ ಹಾಗೂ ಇತರೆ 17 ಸ್ಥಾನ ಗಳಿಸಿದ್ದಾರೆ.
ರಾಜ್ಯಸಭೆಯ 245 ಸ್ಥಾನಗಳಲ್ಲಿ ಬಹುಮತಕ್ಕೆ 123 ಸ್ಥಾನಗಳು ಬೇಕು. ಆದ್ರೆ ಸದ್ಯ ಎನ್ಡಿಎ 110 ಸ್ಥಾನಗಳನ್ನು ಜಯಿಸಿದ್ದು, ಬಹುಮತದ ಅಂಚಿನಲ್ಲಿದೆ. ಆದರೆ ಬಿಜೆಡಿ, ಅಣ್ಣಾ ಡಿಎಂಕೆ ಸೇರಿ ಇತರ ಪಕ್ಷಗಳ ಬೆಂಬಲ ಪಡೆದು ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ ಬಿಜೆಪಿಗೆ ಸಲೀಸಾಗಲಿದೆ.
(ಇದನ್ನೂ ಓದಿ: ರಾಜ್ಯಸಭೆ ಚುನಾವಣೆಯಲ್ಲಿ ನಿರ್ಮಲಾ, ಜಗ್ಗೇಶ್, ಲೆಹರ್ ಸಿಂಗ್, ಜೈರಾಂ ರಮೇಶ್‌ಗೆ ಗೆಲುವು)