ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಕೆಲ ದಿನಗಳಿಂದ ತೈಲ ಬೆಲೆಯಲ್ಲಿ ಗಣನೀಯವಾದ ಏರಿಕೆ ಕಂಡು ಬಂದಿದೆ. ಇದಕ್ಕೆ ಮುಖ್ಯ ಕಾರಣವಾಗಿದ್ದು ಉಕ್ರೇನ್-ರಷ್ಯಾ ನಡುವಿನ ಬಿಕ್ಕಟ್ಟು. ಇದರ ಜೊತೆಗೆ ಕಳೆದ ನಾಲ್ಕು ತಿಂಗಳಿಂದ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆ ಕಂಡು ಬಂದಿಲ್ಲ. ಇದೀಗ ಮಾರ್ಚ್ 18ರೊಳಗೆ ತೈಲ ಬೆಲೆಯಲ್ಲಿ ಗಣನೀಯವಾದ ಏರಿಕೆ ಕಂಡು ಬರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ನಾಳೆಯಿಂದಲೇ ತೈಲ ಬೆಲೆ ಪರಿಷ್ಕರಣೆ?: ಪಂಚರಾಜ್ಯಗಳ ಚುನಾವಣೆ ಇಂದು ಮುಕ್ತಾಯವಾಗ್ತಿದ್ದು, ನಾಳೆಯಿಂದಲೇ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬರುವ ಸಾಧ್ಯತೆ ಇದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದ್ದು, ಮಾರ್ಚ್ 18ರೊಳಗೆ ಪ್ರತಿ ಲೀಟರ್ ಮೇಲೆ 12ರೂಪಾಯಿ ಏರಿಕೆಯಾಗಲಿದೆ ಎನ್ನಲಾಗುತ್ತಿದೆ.
ಕಚ್ಚಾ ತೈಲ ಬೆಲೆ ಬ್ಯಾರಲ್ಗೆ 130 ಡಾಲರ್: ಸದ್ಯ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್ಗೆ 130 ಡಾಲರ್ ತಲುಪಿದ್ದು, ನಷ್ಟದಲ್ಲಿ ಎಲ್ಲ ಪೆಟ್ರೋಲಿಯಂ ಕಂಪನಿಗಳು ತೈಲ ಮಾರಾಟ ಮಾಡ್ತಿವೆ. ಈ ನಷ್ಟ ಸರಿದೂಗಿಸಿಕೊಳ್ಳಲು ಇದೀಗ ಪ್ರತಿದಿನ ಇಂಧನ ಬೆಲೆ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ.
ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದ ಕಾರಣ ಕಳೆದ ಕೆಲ ತಿಂಗಳಿಂದ ತೈಲ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ. ಇಂದು ಉತ್ತರ ಪ್ರದೇಶದಲ್ಲಿ ಕೊನೆಯ ಹಂತದ ಮತದಾನ ನಡೆಯುತ್ತಿದೆ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಇಂಧನ ಬೆಲೆಯಲ್ಲಿ ಏರಿಕೆ ಮಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ನಾಲ್ಕು ತಿಂಗಳಿಂದ ತೈಲ ಬಲೆ ತಟಸ್ಥ: ಕಳೆದ ನಾಲ್ಕು ತಿಂಗಳಿಂದ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಗಣನೀಯವಾದ ಏರಿಕೆ ಕಂಡು ಬಂದಿದ್ದು, ಕೇಂದ್ರ ಸರ್ಕಾರ ಮಾತ್ರ ಯಾವುದೇ ರೀತಿಯ ಬೆಲೆ ಏರಿಕೆ ಮಾಡಿಲ್ಲ. ಹೀಗಾಗಿ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 12 ರೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ICICI ಸೆಕ್ಯುರಿಟೀಸ್ ವರದಿ ಪ್ರಕಾರ ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬ ವರದಿ ಬಹಿರಂಗಗೊಂಡಿದೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಸಂಘರ್ಷ: ಕೀವ್ ಸೇರಿ 4 ನಗರಗಳಲ್ಲಿ ಕದನ ವಿರಾಮ ಘೋಷಣೆ
'ತೈಲ ಕಂಪನಿಗಳು ನಷ್ಟದಲ್ಲಿವೆ': ವರದಿಯ ಪ್ರಕಾರ, ಸಾರ್ವಜನಿಕ ವಲಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 12 ರೂಪಾಯಿ ನಷ್ಟ ಅನುಭವಿಸುತ್ತಿವೆ ಎಂದು ತಿಳಿದು ಬಂದಿದೆ.