ಎರ್ನಾಕುಲಂ (ಕೇರಳ): ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ತ್ರಿಕ್ಕಕ್ಕರದಲ್ಲಿನ ಮತದಾನ ಕೇಂದ್ರಕ್ಕೆ ನಿನ್ನೆ ವೋಟ್ ಮಾಡಲು ಬಂದವರು ಆಶ್ಚರ್ಯಚಕಿತರಾದರು.
ಎರ್ನಾಕುಲಂ ಜಿಲ್ಲಾಡಳಿತವು ತ್ರಿಕ್ಕಕ್ಕರ ಸಮುದಾಯ ಭವನವನ್ನು ಮತದಾನ ಕೇಂದ್ರವನ್ನಾಗಿಸಿದ್ದು, ಇಲ್ಲಿ ರೋಬೋಟ್ ಅನ್ನು ಅಳವಡಿಸಿತ್ತು. ಸಯಾಬೊಟ್ ಹೆಸರಿನ ಈ ರೋಬೋಟ್ ಮತದಾರರನ್ನು ಸ್ವಾಗತಿಸಿ, ಅವರ ದೇಹದ ತಾಪಮಾನವನ್ನು ಪರಿಶೀಲಿಸುತ್ತಿತ್ತು. ಮತ ಚಲಾಯಿಸುವ ಮೊದಲು ಅವರಿಗೆ ಸ್ಯಾನಿಟೈಸರ್ಗಳನ್ನು ನೀಡುತ್ತಿತ್ತು.
ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಕಂಡುಬಂದಲ್ಲಿ ಅಂತಹ ಮತದಾರರನ್ನು ಅಧಿಕಾರಿಯನ್ನು ಸಂಪರ್ಕಿಸುವಂತೆ ಸಲಹೆ ನೀಡುತ್ತಿತ್ತು. ಮಾಸ್ಕ್ ಸರಿಯಾಗಿ ಧರಿಸಿಕೊಳ್ಳುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಸೂಚಿಸುತ್ತಿತ್ತು.
ಓದಿ: ವಯನಾಡಿನಲ್ಲಿ 100 ಕೆಜಿ ಗಾಂಜಾ ವಶಕ್ಕೆ.. ಇಬ್ಬರು ಅಂದರ್
ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಸಲುವಾಗಿ ನಾವಿಲ್ಲಿ ರೋಬೋಟ್ ಅಳವಡಿಸಿದ್ದೇವೆ. ಜನರು ರೋಬೋಟ್ ನೀಡುವ ಸ್ಯಾನಿಟೈಸರ್ ಮೂಲಕ ತಮ್ಮ ಕೈಗಳನ್ನು ಸ್ವಚ್ಛಗೊಳಿಸಬಹುದು. ರೋಬೋಟ್ನ ಕಾರ್ಯಕ್ಷಮತೆಯ ಆಧಾರದ ಮೇಲೆ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಿ ಇತರ ಸ್ಥಳಗಳಲ್ಲಿ ನಿಯೋಜಿಸಲಾಗುವುದು ಎಂದು ಎರ್ನಾಕುಲಂ ಜಿಲ್ಲಾಧಿಕಾರಿ ಎಸ್.ಸುಹಾಸ್ ಹೇಳಿದರು.
ಮುಂದಿನ ವರ್ಷ ಕೇರಳದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಸದ್ಯ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. ನಿನ್ನೆ ಎರ್ನಾಕುಲಂ, ಕೊಟ್ಟಾಯಂ, ತ್ರಿಶೂರ್, ಪಾಲಕ್ಕಾಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಎರಡನೇ ಹಂತದ ಮತದಾನ ನಡೆದಿದೆ.