ಕಟ್ನಿ(ಮಧ್ಯಪ್ರದೇಶ): ಕಟ್ನಿ ನಗರದ ಬಾರ್ಗವಾನ್‌ನಲ್ಲಿ ಹಾಡಹಗಲೇ ದರೋಡೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಣಪ್ಪುರಂ ಗೋಲ್ಡ್ ಲೋನ್ ಫೈನಾನ್ಸ್ ಕಂಪನಿಯಲ್ಲಿ ಹಗಲು ದರೋಡೆ ನಡೆಸಿರುವ ಬಂದೂಕುಧಾರಿ ಡಕಾಯಿತರು 15 ಕೆಜಿ ಚಿನ್ನ ಮತ್ತು ಸುಮಾರು 7 ಕೋಟಿ ರೂಪಾಯಿ ಮೌಲ್ಯದ ನಗದು ದೋಚಿದ್ದಾರೆ.
ಬ್ಯಾಂಕ್ ನೌಕರರ ಮೇಲೆ ಹಲ್ಲೆ ನಡೆಸಿದ ಡಕಾಯಿತರು ಬಂದೂಕು ತೋರಿಸಿ ಲಾಕರ್‌ಗಳ ಬೀಗ ತೆರೆದು ಚಿನ್ನಾಭರಣ ಮತ್ತು ಹಣವನ್ನು ತೆಗೆದುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. 6 ರಿಂದ 7 ಮಂದಿ ಮುಸುಕುಧಾರಿ ಡಾಕಾಯಿತರು ಇದರಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಬ್ಯಾಂಕ್ ಅಧಿಕಾರಿ ರಾಹುಲ್ ಕೋಸ್ತಾ ಮಾತನಾಡಿ, ಬೆಳಗ್ಗೆ 930ಕ್ಕೆ ಬ್ಯಾಂಕ್ ತೆರೆಯಲಾಗಿದೆ. 10.30ರ ಸುಮಾರಿಗೆ ಕೈಯಲ್ಲಿ ರಿವಾಲ್ವರ್ ಹಿಡಿದುಕೊಂಡಿದ್ದ ನಾಲ್ವರು ಯುವಕರು ಒಳಗೆ ಪ್ರವೇಶಿಸಿದ್ದರು. ಬಂದ ತಕ್ಷಣ ಎಲ್ಲ ಉದ್ಯೋಗಿಗಳಿಗೆ ಬೆದರಿಕೆ ಹಾಕಿ ಕೀ ಕಿತ್ತುಕೊಂಡು ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದು ಹಣದೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ಅಷ್ಟೇ ಅಲ್ಲ, ಉದ್ಯೋಗಿಯೊಬ್ಬರ ಬೈಕನ್ನೂ ತೆಗೆದುಕೊಂಡು ಹೋಗಿದ್ದಾರೆ. ತಕ್ಷಣವೇ ನಾವು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು.
ಬ್ಯಾಂಕ್ ದರೋಡೆ ಮಾಡುವ ಹಿಂದಿನ ದಿನ ಆ ಬೀದಿಯಲ್ಲಿ ಡಾಕಾಯಿತರು ಕಾಣಿಸಿಕೊಂಡಿದ್ದರು ಎಂದು ಅಕ್ಕಪಕ್ಕದ ಅಂಗಡಿಯವರು ಮಾಹಿತಿ ನೀಡಿದ್ದಾರೆ. ದರೋಡೆಕೋರರು ಮೊದಲೇ ಯೋಜನೆ ರೂಪಿಸಿಕೊಂಡು ಕಳ್ಳತನಕ್ಕೆ ಇಳಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕೇಡಿಯಾ ಮಾತನಾಡಿ, ದೋಚಿದ ಚಿನ್ನದ ಸಂಪೂರ್ಣ ದಾಖಲೆ ಪರಿಶೀಲಿಸಲಾಗುತ್ತಿದೆ. ಆ ನಂತರವೇ ಲಾಕರ್‌ನಲ್ಲಿ ಎಷ್ಟು ಚಿನ್ನ ಇಡಲಾಗಿತ್ತು ಎಂಬುದು ತಿಳಿಯಲಿದೆ. ಇಷ್ಟು ದೊಡ್ಡ ಫೈನಾನ್ಸ್ ಬ್ಯಾಂಕಿನಲ್ಲಿ ಒಬ್ಬನೇ ಒಬ್ಬ ಸೆಕ್ಯೂರಿಟಿ ಗಾರ್ಡ್ ಅನ್ನು ನಿಯೋಜಿಸಿಲ್ಲ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಸದ್ಯ ಪೊಲೀಸರು ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾತ್ರೋರಾತ್ರಿ ಹೊರಗಿನಿಂದ ಮನೆಗಳ ಬಾಗಿಲು ಲಾಕ್ ಮಾಡಿ ಬೈಕ್ ಕಳ್ಳತನ: ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ