ರಾಜಸ್ಥಾನ/ಛತ್ತೀಸ್ಗಢ: ಹೊಸ ವರ್ಷದ ಸಂಭ್ರಮದ ನಡುವೆ ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಹನುಮಾನ್ಗಢ ಜಿಲ್ಲೆಯಲ್ಲಿ ನಡೆದ ಟ್ರಕ್ ಮತ್ತು ಕಾರು ಮುಖಾಮುಖಿಯಲ್ಲಿ ಐವರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡಿದ್ದಾನೆ. ಛತ್ತೀಸ್ಗಢದ ರಾಯಪುರದಲ್ಲಿ ಬೈಕ್ ಅಪಘಾತದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ಟ್ರಕ್ ರೂಪದಲ್ಲಿ ಬಂದೆರಗಿದ ಜವರಾಯ: ಹನುಮಾನ್ಗಢ ಜಿಲ್ಲೆಯಲ್ಲಿ ಇಟ್ಟಿಗೆ ತುಂಬಿಕೊಂಡು ಸರ್ದಾರ್ ನಗರದ ಕಡೆಗೆ ಹೋಗುತ್ತಿದ್ದ ಟ್ರಕ್ಗೆ ಕಾರು ರಭಸವಾಗಿ ಇಂದು ಬೆಳಗ್ಗೆ ಡಿಕ್ಕಿಯಾಗಿದೆ. ಇದರಿಂದ ಕಾರಿನಲ್ಲಿದ್ದ 6 ಜನರ ಪೈಕಿ ಐವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ಬಳಿಕ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ನಿಖರವಾಗಿ ಹೇಗೆ ನಡೆಯಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಪರಾರಿಯಾದ ಟ್ರಕ್ ಚಾಲಕನ ಪತ್ತೆ ನಡೆಸಲಾಗುತ್ತಿದೆ. ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಶವಪರೀಕ್ಷೆ ನಡೆಸಲು ಆಸ್ಪತ್ರೆಗೆ ರವಾನಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕರ್ತವ್ಯಕ್ಕೆ ಹೋಗ್ತಿದ್ದ ಪೊಲೀಸ್ ಸಾವು: ಹೊಸ ವರ್ಷದ ಮುನ್ನಾದಿನ ಸಂಭ್ರಮಾಚರಣೆಯ ಬಂದೋಬಸ್ತ್ಗೆ ತೆರಳುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಮತ್ತು ಇನ್ನೊಬ್ಬ ವ್ಯಕ್ತಿ ಛತ್ತೀಸ್ಗಢದ ರಾಯಪುರದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ರಸ್ತೆ ಬದಿ ನಿಂತಿದ್ದ ಟ್ರಕ್ಗೆ ಬೈಕ್ ಸವಾರ ರಭಸವಾಗಿ ಡಿಕ್ಕಿ ಹೊಡೆದಿದ್ದಾನೆ. ಆತ ಸ್ಥಳದಲ್ಲೇ ಅಸುನೀಗಿದ್ದಾನೆ.
ಇದೇ ವೇಳೆ ಅದೇ ಮಾರ್ಗವಾಗಿ ಬರುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ತನ್ನ ಬೈಕ್ ನಿಯಂತ್ರಿಸಲು ಆಗದೇ ಟ್ರಕ್ಗೆ ಗುದ್ದಿದ್ದಾನೆ. ಗಂಭೀರ ಗಾಯಗೊಂಡ ಆರಕ್ಷಕನನ್ನು ಹತ್ತಿರ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಇದನ್ನೂ ಓದಿ: ಎನ್ಐಎ ವಾರ್ಷಿಕ ಪ್ರಕರಣಗಳ ಅಂಕಿ ಅಂಶ ; ಇದೇ ಮೊದಲ ಬಾರಿಗೆ ಕೇಸ್ಗಳ ಸಂಖ್ಯೆ ಅಧಿಕ