ಬಹ್ರೈಚ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಬೀದರ್ನ 7 ಜನರು ಸಾವನ್ನಪ್ಪಿ, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಲ್ಲೆಯ ಮೋತಿಪುರ್ ಪ್ರದೇಶದ ಲಖಿಂಪುರ-ಬಹ್ರೈಚ್ ರಾಜ್ಯ ರಸ್ತೆಯಲ್ಲಿ ಭಾನುವಾರ ಮುಂಜಾನೆ ರಸ್ತೆ ಅಪಘಾತ ಸಂಭವಿಸಿದೆ.
ಕರ್ನಾಟಕದಿಂದ ಅಯೋಧ್ಯೆಗೆ ತೆರಳುತ್ತಿದ್ದ ಭಕ್ತರಿದ್ದ ಟೆಂಪೋ ಟ್ರಾವೆಲರ್ ಹಾಗೂ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದೆ. ಬೀದರ್ನ ಗಾಂಧಿಗಂಜ್ ಪ್ರದೇಶದ 16 ಮಂದಿ ಅಯೋಧ್ಯೆಗೆ ಶ್ರೀರಾಮ ಜನ್ಮಭೂಮಿ ಪೂಜೆಗೆಂದು ತೆರಳುತ್ತಿದ್ದರು. ಅಪಘಾತದಲ್ಲಿ ಟೆಂಪೋ ಚಾಲಕ ಸೇರಿ ಏಳು ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಇದರಲ್ಲಿ 2 ಮಹಿಳೆಯರೂ ಸೇರಿದ್ದಾರೆ. ಗಂಭೀರವಾಗಿ ಗಾಯಗೊಂಡ 10 ಭಕ್ತರಲ್ಲಿ ನಾಲ್ವರ ಜನರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಮೃತರನ್ನು ಶಿವಕುಮಾರ ಪೂಜಾರಿ (28), ಜಗದಾಂಬ (52), ಮನ್ಮತ್ (36), ಅನಿಲ್ (30), ಸಂತೋಷ್ (35), ಶಶಿಕಲಾ (38) ಮತ್ತು ಸರಸ್ವತಿ (47) ಎಂದು ಗುರುತಿಸಲಾಗಿದೆ. ಗಾಯಗೊಂಡ ಬಾಲಕಿ ಭೂಮಿಕಾ (16) ಜೊತೆ ಪೊಲೀಸ್ ಅಧಿಕಾರಿಗಳು ಕುಟುಂಬ ಸದಸ್ಯರೊಂದಿಗೆ ವಿಡಿಯೋ ಕಾಲ್ನಲ್ಲಿ ಸಂಪರ್ಕಿಸಿ ಮತ್ತು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಮೃತರನ್ನು ಗುರುತಿಸಿದ್ದಾರೆ. ಸ್ಥಳೀಯರ ಸಹಾಯದಿಂದ ಎಲ್ಲಾ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಟೆಂಪೋ ಟ್ರಾವೆಲರ್ ವಾಹನವು ಓವರ್‌ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬಂದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಇಬ್ಬರು ಅಸುನೀಗಿದ್ದಾರೆ.
ಘಟನೆ ಬಗ್ಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಲವ್ ಜಿಹಾದ್ ಆರೋಪ: ಇಸ್ಲಾಂಗೆ ಮತಾಂತರಗೊಳ್ಳುವಂತೆ ಪ್ರೀತಿಸಿ ಮದುವೆಯಾದ ವಿಧವೆಗೆ ಒತ್ತಾಯ