ಸತಾರಾ (ಮಹಾರಾಷ್ಟ್ರ): ಸತಾರಾದ ಪುಸೇವಾಲಿನಲ್ಲಿ (ಟಿ.ಖಟವ್) ಭಾನುವಾರ ತಡರಾತ್ರಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉದ್ರಿಕ್ತರ ಗುಂಪು, ವಾಹನಗಳು ಹಾಗೂ ಅಂಗಡಿಗಳಿಗೆ ಬೆಂಕಿ ಹಚ್ಚಿದೆ. ಘಟನೆಯಿಂದಾಗಿ ಸೋಮವಾರ ಬೆಳಗ್ಗೆಯಿಂದಲೇ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಪುಸೇವಾಲಿಯಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ಪುಸೇವಾಲಿಯಲ್ಲಿ ರಾತ್ರಿ ನಡೆದ ಗಲಭೆಯಲ್ಲಿ ಧಾರ್ಮಿಕ ಸ್ಥಳಕ್ಕೆ ಹಾನಿಯಾಗಿದೆ. ಕಿಡಿಗೇಡಿಗಳು ಕೆಲವು ಅಂಗಡಿಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಕಲ್ಲು ತೂರಾಟದಲ್ಲಿ ಹಲವು ಯುವಕರು ಗಾಯಗೊಂಡಿದ್ದಾರೆ. ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳು ಕರಾಡ್, ಸತಾರಾ, ವಡುಜ್, ಔಂಧ್ ಮತ್ತು ಕಡೆಗಾಂವ್‌ನಲ್ಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುನ್ನೆಚ್ಚರಿಕೆ ಜಿಲ್ಲೆಯಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಧಾರ್ಮಿಕ ಸ್ಥಳದ ಉಸ್ತುವಾರಿ ಸಾವು: ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್‌ನಿಂದಾಗಿ ಕಳೆದ ಕೆಲವು ದಿನಗಳಿಂದ ಪುಸೇವಾಲಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಶಾಂತಿ ಕಾಪಾಡಿದ್ದರು. ಆದರೆ, ಭಾನುವಾರ ರಾತ್ರಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ಗಲಭೆ ತೀವ್ರ ಸ್ವರೂಪ ನಡೆದಿತ್ತು. ಗಲಭೆಯಲ್ಲಿ ಧಾರ್ಮಿಕ ಸ್ಥಳವೊಂದರ ಉಸ್ತುವಾರಿ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸತಾರಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘರ್ಷಣೆಯಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಂತಿ ಕಾಪಾಡುವಂತೆ ಮನವಿ: ಸೋಮವಾರ ಬೆಳಿಗ್ಗೆ ಪುಸೆಸಾವಿಗೆ ದೌಡಾಯಿಸಿದ ಸಂಸದ ಉದಯರಾಜೇ ಭೋಸ್ಲೆ, ಶಾಂತಿ ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ. ಎರಡೂ ಗುಂಪಿನ ಜನರೊಂದಿಗೆ ಸಂವಾದ ನಡೆಸಿದ್ದಾರೆ. ಏತನ್ಮಧ್ಯೆ, ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಔಂಧ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಖಾತಾವ್ ತಾಲೂಕಿನ ಪುಸೇವಾಲಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: 'ಗೋಧ್ರಾದಂತಹ ಘಟನೆ ಮತ್ತೆ ಉದ್ಭವಿಸಬಹುದು': ಉದ್ಧವ್ ಠಾಕ್ರೆ ಎಚ್ಚರಿಕೆ