ಪ್ರಯಾಗ್‌ರಾಜ್:(ಉತ್ತರಪ್ರದೇಶ) ಅನುಕಂಪದ ಆಧಾರದ ಕೋಟಾದಲ್ಲಿ ನೇಮಕಗೊಂಡಿರುವ ನೌಕರರು ಕುಟುಂಬದ ಇತರ ಸದಸ್ಯರನ್ನು ನೋಡಿಕೊಳ್ಳುವ ಜವಾಬ್ದಾರಿ ಸಮರ್ಪಕ ನಿಭಾಯಿಸದಿದ್ದರೆ ನೌಕರನ ನೇಮಕಾತಿ ಹಿಂಪಡೆಯಬಹುದು ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅವಲಂಬಿತರ ಹಿತಾಸಕ್ತಿ ತಕ್ಕಂತೆ ಜವಾಬ್ದಾರಿ ಹೊತ್ತು ಪೋಷಣೆ ಮಾಡದಿದ್ದರೆ ಮೂರು ತಿಂಗಳೊಳಗೆ ಅವಲಂಬಿತ ನೌಕರನ ನೇಮಕಾತಿ ಹಿಂಪಡೆಯುವಂತೆ ನ್ಯಾಯಾಲಯ ಪ್ರಯಾಗರಾಜ್ ರೈಲ್ವೆ ಇಲಾಖೆಗೆ ನಿರ್ದೇಶನ ಮಾಡಿದೆ.
ಪ್ರಯಾಗ್‌ರಾಜ್‌ನ ಸುಧಾ ಶರ್ಮಾ ಮತ್ತು ಇತರರ ಅರ್ಜಿಯನ್ನು ನ್ಯಾಯಮೂರ್ತಿ ಪಂಕಜ್ ಭಾಟಿಯಾ ಸಮಕ್ಷಮ ಪರಿಶೀಲಿಸಿ, ಈ ಆದೇಶ ಹೊರಡಿಸಿದ್ದಾರೆ. ಅರ್ಜಿದಾರರನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ ಮೇಲೆ ಅವಲಂಬಿತ ನೌಕರನಿಗೆ ನೇಮಕಾತಿ ಆದೇಶ ನೀಡಲಾಗಿರುತ್ತದೆ. ಆದರೆ, ಅವರು ನೀಡಿದ ಭರವಸೆ ಈಡೇರಿಸುತ್ತಿಲ್ಲ ಎಂದು ಅರ್ಜಿದಾರರು ದೂರಿದ್ದರು.
ಅರ್ಜಿದಾರರ ತಂದೆ ರೈಲ್ವೆ ಉದ್ಯೋಗಿ. ಸೇವೆಯಲ್ಲಿ ಮರಣ ಹೊಂದಿದ ಬಳಿಕ, ಕುಟುಂಬದ ಸದಸ್ಯರಿಗೆ ಅವಲಂಬಿತ ಕೋಟಾದಲ್ಲಿ ನೇಮಕಾತಿ ನೀಡಲಾಗಿದೆ. ಅರ್ಜಿದಾರರಿಗೆ ವಯಸ್ಸಾಗಿದೆ ಎಂಬ ಕಾರಣದಿಂದ ಅವಲಂಬಿತ ಉದ್ಯೋಗಿ ಅವರನ್ನು ನೋಡಿಕೊಳ್ಳಲು ನಿರಾಕರಿಸಿದ್ದರು. ವಾರಸುದಾರರ ಅನುಕೂಲಕ್ಕಾಗಿ ಅವಲಂಬಿತರ ನೇಮಕ ಮಾಡಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರು ತಮ್ಮ ದೂರನ್ನು ರೈಲ್ವೆ ಅಧಿಕಾರಿಗೆ ನೀಡುವಂತೆ ಮತ್ತು ಅವರ ಸಮಸ್ಯೆಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳುವಂತೆ ರೈಲ್ವೆ ಅಧಿಕಾರಿಗೆ ನ್ಯಾಯಾಲಯ ಇದೇ ವೇಳೆ ಆದೇಶಿಸಿದೆ.
ಇದನ್ನೂ ಓದಿ:ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲ 6 ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ