ನವದೆಹಲಿ: 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜಪಥ್ನಲ್ಲಿ ನಡೆದ ಭಾರತೀಯ ವಾಯುಪಡೆಯ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಭಾರತದ ಮಹಿಳಾ ಫೈಟರ್ ಜೆಟ್ ಪೈಲಟ್ ಭಾವನಾ ಕಾಂತ್ ಭಾಗವಹಿಸಿದರು. ಭಾರತೀಯ ವಾಯುಪಡೆಯು ಲಘು ಯುದ್ಧ ವಿಮಾನ, ಲಘು ಯುದ್ಧ ಹೆಲಿಕಾಪ್ಟರ್ ಮತ್ತು ಸುಖೋಯ್-30 ಯುದ್ಧ ವಿಮಾನಗಳ ಪ್ರದರ್ಶನವನ್ನು ಏರ್ಪಡಿಸಿತ್ತು.
ಬಿಹಾರದ ದರ್ಬಾಂಗ್ ನವರಾದ ಭಾವನಾ ಕಾಂತ್, ಬೆಗುಸರೈನಲ್ಲಿ ಹುಟ್ಟಿ ಬೆಳೆದಿದ್ದರು. ಅವರ ತಂದೆ ಐಒಸಿಎಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಭಾವನಾ ಬಾರೌನಿ ರಿಫೈನರಿ ಡಿಎವಿ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು.
ವಿಮಾನ ಹಾರಾಟ ನಡೆಸುವುದು ಮಾತ್ರವಲ್ಲದೆ ಬ್ಯಾಡ್ಮಿಂಟನ್ ಆಡುವುದು, ವಾಲಿಬಾಲ್, ಸಾಹಸ ಕ್ರೀಡೆಗಳು, ಫೋಟೋಗ್ರಫಿ, ಅಡುಗೆ ಮಾಡುವುದು, ಈಜು ಮತ್ತು ಪ್ರವಾಸ ಹೋಗುವ ಹವ್ಯಾಸವನ್ನು ಭಾವನಾ ಕಾಂತ್ ಹೊಂದಿದ್ದಾರೆ.
140 ವಾಯು ರಕ್ಷಣಾ ರೆಜಿಮೆಂಟ್ನ ಸುಧಾರಿತ ಸ್ಚಿಲ್ಕ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಕ್ಯಾಪ್ಟನ್ ಪ್ರೀತಿ ಚೌಧರಿ ಮುನ್ನಡೆಸಿದ್ದಾರೆ. ಇಂದು ಪಥಸಂಚಲನದಲ್ಲಿ ಭಾಗವಹಿಸಿದ ಏಕೈಕ ಮಹಿಳಾ ರೆಜಿಮೆಂಟ್ ಕಮಾಂಡರ್ ಕ್ಯಾಪ್ಟನ್ ಪ್ರೀತಿ ಚೌಧರಿ ಆಗಿದ್ದಾರೆ. ಸ್ಚಿಲ್ಕ ಶಸ್ತ್ರಾಸ್ತ್ರ ವ್ಯವಸ್ಥೆ ಆಧುನಿಕ ರಾಡಾರ್ ಮತ್ತು ಡಿಜಿಟಲ್ ಅಗ್ನಿ ನಿಯಂತ್ರಣ ಕಂಪ್ಯೂಟರ್ ಹೊಂದಿದೆ.
ಮಹಿಳೆಯರು ಕೂಡ ದೇಶದ ಮಿಲಿಟರಿಯ ಮೂರೂ ಪಡೆಗಳಲ್ಲಿ ತಮ್ಮ ಶಕ್ತಿ, ಸಾಮರ್ಥ್ಯ, ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ರಾಜಪಥ್ನಲ್ಲಿ ನಡೆದ ಪರೇಡ್ನಲ್ಲಿ ಎನ್ಸಿಸಿ ಹೆಣ್ಣುಮಕ್ಕಳು ಮಹಾರಾಷ್ಟ್ರದ ಎನ್ಸಿಸಿ ನಿರ್ದೇಶನಾಲಯದ ಹಿರಿಯ ಅಧೀನ ಅಧಿಕಾರಿ ಸಮೃದ್ಧಿ ಹರ್ಷಲ್ ಸಂತ್ ನೇತೃತ್ವದ ಪಥ ಸಂಚಲನದಲ್ಲಿ ಸಾಗಿದರು.