ಮಧುರೈ , ತಮಿಳುನಾಡು: ಕೇಂದ್ರ ಸರ್ಕಾರವು ಅಧಿಕೃತ ಭಾಷೆಗಳ ಕಾಯ್ದೆ-1963 ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠವು ಸೂಚನೆ ನೀಡಿದ್ದು, ರಾಜ್ಯ ಸರ್ಕಾರ ಯಾವ ಭಾಷೆಯಲ್ಲಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತದೆಯೋ, ಅದೇ ಭಾಷೆಯಲ್ಲಿ ಕೇಂದ್ರ ಸರ್ಕಾರ ಉತ್ತರ ನೀಡಬೇಕೆಂದು ನಿರ್ದೇಶನ ನೀಡಿದೆ.
ಮಧುರೈ ಲೋಕಸಭಾ ಸಂಸದ ಎಸ್. ವೆಂಕಟೇಶ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎನ್.ಕಿರುಬಾಕರನ್ ಮತ್ತು ಎಂ.ದುರೈಸ್ವಾಮಿ ಅವರನ್ನು ಒಳಗೊಂಡ ಪೀಠ ಈ ರೀತಿಯಾಗಿ ಆದೇಶ ನೀಡಿದೆ.
ತಮಿಳುನಾಡಿನಲ್ಲಿ ಗ್ರೂಪ್-ಬಿ ಮತ್ತು ಗ್ರೂಪ್-ಸಿಯ 780 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆ ನಡೆಸುತ್ತಿದ್ದ ವೇಳೆ, ಪುದುಚೇರಿಯಲ್ಲಿ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಿರಲಿಲ್ಲ. ಈ ಕುರಿತು ಕೇಂದ್ರ ಗೃಹ ಇಲಾಖೆಗೆ ಅಕ್ಟೋಬರ್ 9ರಂದು ಸಂಸದ ಎಸ್. ವೆಂಕಟೇಶ್ ಇಂಗ್ಲಿಷ್ ಭಾಷೆಯಲ್ಲಿ ಪತ್ರ ಬರೆದು ಪುದುಚೇರಿಯಲ್ಲೂ ಕನಿಷ್ಠ ಒಂದು ಪರೀಕ್ಷಾ ಕೇಂದ್ರವನ್ನು ಸ್ಥಾಪಿಸುವಂತೆ ಸೂಚನೆ ನೀಡುವಂತೆ ಮನವಿ ಮಾಡಿದ್ದರು.
ನವೆಂಬರ್ 9ರಂದು ಗೃಹ ವ್ಯವಹಾರಗಳ ರಾಜ್ಯ ಸಚಿವರು ಹಿಂದಿ ಭಾಷೆಯಲ್ಲಿ ಉತ್ತರ ಕಳುಹಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಸದ ಎಸ್.ವೆಂಕಟೇಶ್ ಕೇಂದ್ರ ಸರ್ಕಾರ ನೀಡಿದ ಉತ್ತರದಲ್ಲಿ ಏನಿತ್ತು ಎಂಬುದು ನನಗೆ ಗೊತ್ತಾಗಲಿಲ್ಲ ಎಂದು ಆಕ್ಷೇಪಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎನ್.ಕಿರುಬಾಕರನ್ ಮತ್ತು ಎಂ.ದುರೈಸ್ವಾಮಿ ಅವರಿದ್ದ ಪೀಠ ಯಾವ ಭಾಷೆಯಲ್ಲಿ ರಾಜ್ಯಗಳಿಂದ ಅರ್ಜಿಗಳು ಬರುತ್ತವೆಯೋ ಅದೇ ಭಾಷೆಯಲ್ಲಿ ಉತ್ತರ ನೀಡಬೇಕೆಂದು ಆದೇಶಿಸಿ, ಅಧಿಕೃತ ಭಾಷೆಗಳ ಕಾಯ್ದೆ-1963 ಉಲ್ಲಂಘಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತು.
ಇದನ್ನೂ ಓದಿ: ಎರಡು ಮದುವೆಯಾಗಿದ್ದವಳ ಜೊತೆ ಲವ್ವಿ ಡವ್ವಿ: ಮತ್ತೊಬ್ಬನ ಜೊತೆ ರಂಗಿನಾಟ ಆಡಿದ್ದಕ್ಕೆ ಯುವಕ ಆತ್ಮಹತ್ಯೆ