ನವದೆಹಲಿ: ಮಾಜಿ ಒಲಿಂಪಿಕ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಪಿಟಿ ಉಷಾ ಅವರು ಬುಧವಾರ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.ಖ್ಯಾತ ಸಂಗೀತ ಸಂಯೋಜಕ ಇಳಯರಾಜ, ಚಿತ್ರಕಥೆಗಾರ ವಿ. ವಿಜಯೇಂದ್ರ ಪ್ರಸಾದ್ ಮತ್ತು ಧಾರ್ಮಿಕ ನಾಯಕ ವೀರೇಂದ್ರ ಹೆಗ್ಗಡೆ ಹಾಗೂ ಪಿಟಿ ಉಷಾ ಅವರನ್ನು ಸರ್ಕಾರವು ಸಂಸತ್ತಿನ ಮೇಲ್ಮನೆಗೆ ನಾಮನಿರ್ದೇಶನ ಮಾಡಿತ್ತು.
"ಪಿಲವುಲ್ಲಕಂಡಿ ತೆಕ್ಕೆಯಪರಂಬಿಲ್ ಉಷಾ (ನಾಮನಿರ್ದೇಶಿತ) ಅವರು ಸಂವಿಧಾನ ನಿಷ್ಠೆಯ ಪ್ರಮಾಣ ವಚನ ಸ್ವೀಕಾರ ಸ್ವೀಕರಿಸಲಿದ್ದಾರೆ" ಎಂಬ ಶೀರ್ಷಿಕೆಯಡಿ ಪಿಟಿ ಉಷಾ ಅವರು ಪ್ರಮಾಣ ವಚನ ಸ್ವೀಕರಿಸುವ ವಿಷಯವನ್ನು ಇಂದಿನ ರಾಜ್ಯಸಭೆ ಕಲಾಪ ವ್ಯವಹಾರದ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
ಪಿಟಿ ಉಷಾ ಅವರನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಒಂದು ದಿನದ ಹಿಂದೆ ಉಷಾ ಅವರು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿಯಾಗಿದ್ದರು. ಮೇಲ್ಮನೆ ಸಂಸದರಾಗಿ ನಾಮನಿರ್ದೇಶನಗೊಂಡಿದ್ದಕ್ಕಾಗಿ ನಡ್ಡಾ ಅವರು ಉಷಾರಿಗೆ ಶುಭ ಹಾರೈಸಿದರು.
ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಉಷಾ ಭಾರತದ ಶ್ರೇಷ್ಠ ಕ್ರೀಡಾ ಪಟುಗಳಲ್ಲಿ ಒಬ್ಬರಾಗಿದ್ದಾರೆ. ಪಯ್ಯೋಲಿ ಎಕ್ಸ್‌ಪ್ರೆಸ್ ಎಂದು ಜನಪ್ರಿಯವಾಗಿರುವ ಅವರು ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ವಿಶ್ವ ಜೂನಿಯರ್ ಇನ್ವಿಟೇಶನಲ್ ಮೀಟ್, ಏಷ್ಯನ್ ಚಾಂಪಿಯನ್‌ಶಿಪ್‌ಗಳು ಮತ್ತು ಏಷ್ಯನ್ ಗೇಮ್ಸ್ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅವರು ಪದಕಗಳನ್ನು ಗೆದ್ದಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ರಾಷ್ಟ್ರೀಯ ಮತ್ತು ಏಷ್ಯನ್ ದಾಖಲೆಗಳನ್ನು ಸ್ಥಾಪಿಸಿದ್ದಾರೆ ಮತ್ತು ಮುರಿದಿದ್ದಾರೆ.
ಕ್ರೀಡೆಯಲ್ಲಿ, ವಿಶೇಷವಾಗಿ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಯುವಜನತೆಗೆ ಉಷಾ ಸ್ಫೂರ್ತಿಯಾಗಿದ್ದಾರೆ. 1984 ರ ಒಲಂಪಿಕ್ಸ್‌ನಲ್ಲಿ ಅವರು ಮಹಿಳಾ 400M ಹರ್ಡಲ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು 1/100 ಸೆಕೆಂಡ್‌ನಿಂದ ಕಂಚಿನ ಪದಕವನ್ನು ಕಳೆದುಕೊಂಡಿದ್ದರು.