ಬೆಂಗಳೂರು: ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ ರಾವ್ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮಧ್ಯೆ ಇತ್ತೀಚೆಗೆ ರಾಜಕೀಯ ವಿಷಯ ಕುರಿತಾದ ಸಭೆ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಪ್ರಾದೇಶಿಕ ಪಕ್ಷಗಳು ಆಯಾ ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ತನಗೆ ತೋಚಿದಂತೆ ಕೆಲಸ ಮಾಡುತ್ತಿದೆ ಎಂಬ ಒಮ್ಮತಾಭಿಪ್ರಾಯಕ್ಕೆ ಇಬ್ಬರೂ ಬಂದಿದ್ದಾರೆ ಎನ್ನಲಾಗಿದೆ.
ನೆರೆಹೊರೆಯ ರಾಜ್ಯಗಳಲ್ಲಿ ನಾಯಕತ್ವದ ಕೊರತೆ ಇರುವುದು ಕಂಡು ಬಂದಾಗ ಅಂಥ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಪ್ರವೇಶ ಪಡೆಯಬೇಕೆಂಬುದು ಈ ನಾಯಕರ ಅಭಿಪ್ರಾಯವಾಗಿದೆ. ಅಖಿಲೇಶ್ ಯಾದವ್ ಮತ್ತು ರಾಜ್ಯಸಭೆ ಸಂಸದ ರಾಮಗೋಪಾಲ ಯಾದವ್ ಅವರು ಸಿಎಂ ಕೆಸಿಆರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದು, ದೇಶದ ವಿವಿಧ ರಾಜ್ಯಗಳಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು ಎನ್ನಲಾಗಿದೆ.
ಕೇಂದ್ರ ನೀತಿ ವಿರುದ್ಧ ಅಸಮಾಧಾನ: ಪ್ರತಿಪಕ್ಷಗಳ ಸರ್ಕಾರವಿರುವ ರಾಜ್ಯಗಳಲ್ಲಿನ ಸಚಿವರು ಹಾಗೂ ಜನಪ್ರತಿನಿಧಿಗಳ ವಿರುದ್ಧ, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕೆಟ್ಟ ಸಂಪ್ರದಾಯವನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದು ಇಬ್ಬರೂ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ದಕ್ಷಿಣದ ಪಕ್ಷಗಳಿಗೆ ಬೇರೆ ಪ್ರದೇಶಗಳಲ್ಲಿ ವ್ಯಾಪಿಸಲು ಭಾಷಾ ಸಮಸ್ಯೆ ಇದೆ, ಆದರೆ ಉತ್ತರದ ಪಕ್ಷಗಳಿಗೆ ಇಂಥ ಸಮಸ್ಯೆ ಇಲ್ಲ.
ಸಮಾಜವಾದಿ ಪಕ್ಷದಂಥ ಪ್ರಾದೇಶಿಕ ಪಕ್ಷಗಳು ನೆರೆಯ ಉತ್ತರಾಖಂಡ, ಬಿಹಾರ, ದೆಹಲಿ ಮತ್ತು ಹರಿಯಾಣಗಳಿಗೆ ವಿಸ್ತರಿಸಬಹುದು ಎಂಬುದು ಕೆಸಿಆರ್ ಅಭಿಪ್ರಾಯವಾಗಿದೆ. ಇಂಥ ಸಮಯದಲ್ಲಿ ಪ್ರಾದೇಶಿಕ ಪಕ್ಷಗಳ ಬೆಳವಣಿಗೆಗೆ ಪರಸ್ಪರ ಪೂರಕವಾಗಿ ಕೆಲಸ ಮಾಡುವ ಬಗ್ಗೆ ಇಂಗಿತ ವ್ಯಕ್ತವಾಗಿದೆ.
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಉಪಚುನಾವಣೆಗಳಲ್ಲಿ ಅಖಿಲೇಶ್ ಯಾದವ್ ಹಾಗೂ ಆಜಂ ಖಾನ್ ಅವರಂಥ ಘಟಾನುಘಟಿಗಳು ಕಾಲಿ ಮಾಡಿದ್ದ ಲೋಕಸಭಾ ಕ್ಷೇತ್ರಗಳಲ್ಲೇ ಎಸ್ಪಿ ಸೋಲು ಕಾಣುವಂತಾಗಿತ್ತು. ಈ ಚುನಾವಣೆಯಲ್ಲಿ ಬಿಎಸ್ಪಿಯು ರಾಂಪುರದಲ್ಲಿ ಯಾವುದೇ ಅಭ್ಯರ್ಥಿಯನ್ನು ಹಾಕದೇ ಹಾಗೂ ಆಜಂಗಢನಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಗೆಲುವಿಗೆ ನೇರವಾಗಿ ಸಹಾಯ ಮಾಡಿದೆ ಎಂಬುದನ್ನು ಅಖಿಲೇಶ್ ಯಾದವ್ ಕೆಸಿಆರ್ ಅವರಿಗೆ ತಿಳಿಸಿದ್ದಾರೆ.
ಒಟ್ಟಾಗಿ ಭೋಜನ ಸವಿದ ನಾಯಕರು: ಸುಮಾರು ಒಂದೂವರೆ ಗಂಟೆ ಕಾಲ ನಡೆದ ಮೀಟಿಂಗ್ ನಂತರ ಸಿಎಂ ಕೆಸಿಆರ್, ಅಖಿಲೇಶ್ ಯಾದವ್, ರಾಮಗೋಪಾಲ ವರ್ಮಾ ಮತ್ತು ತೆಲಂಗಾಣ ಯೋಜನಾ ಆಯೋಗದ ಉಪಾಧ್ಯಕ್ಷ ವಿನೋದ ಎಲ್ಲರೂ ಒಟ್ಟಾಗಿ ಭೋಜನ ಸವಿದರು. ಇದಕ್ಕೂ ಮುನ್ನ ಮೇ 21 ರಂದು ಅಖಿಲೇಶ್ ಹಾಗೂ ಕೆಸಿಆರ್ ಭೇಟಿಯಾಗಿದ್ದರು.
ಪರಸ್ಪರ ಸಹಕಾರದ ತತ್ವದಡಿ, ಮುಂದಿನ ಚುನಾವಣೆಗಳಲ್ಲಿ ಟಿಆರ್ಎಸ್ ಉತ್ತರ ಪ್ರದೇಶದಲ್ಲಿ ಹಾಗೂ ಎಸ್ಪಿ ತೆಲಂಗಾಣದಲ್ಲಿ ಸ್ಪರ್ಧಿಸುವ ದಟ್ಟ ಸಾಧ್ಯತೆಗಳಿವೆ. ಆರ್ಜೆಡಿ ಯುವ ಮುಖಂಡ ತೇಜಸ್ವಿ ಯಾದವ್ ಹಾಗೂ ರೈತ ನಾಯಕ ಟಿಕಾಯತ್ ಕೂಡ ಕೆಸಿಆರ್ ಅವರನ್ನು ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ತೈವಾನ್ಗೆ ಪೆಲೋಸಿ ಭೇಟಿ - ಕೆರಳಿದ ಚೀನಾ... ಆಫ್ರಿಕಾಕ್ಕೆ ಹಾರಲಿರುವ ಅಮೆರಿಕ ವಿದೇಶಾಂಗ ಸಚಿವ ಬ್ಲಿಂಕೆನ್!