ಅಮರಾವತಿ(ಮಹಾರಾಷ್ಟ್ರ): ಅಮರಾವತಿ ಜಿಲ್ಲೆಯ ಅಂಜನಗಾಂವ್ ಬಾರಿಯ ರೈತನೋರ್ವ ತಮ್ಮ ಕೋಳಿ ಫಾರಂನಿಂದ ದಿನಕ್ಕೆ ಒಂದು ಲಕ್ಷದ 20 ಸಾವಿರ ಮೊಟ್ಟೆಗಳನ್ನು ಉತ್ಪಾದಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ರವೀಂದ್ರ ಮೆಟ್ಕರ್ ದಾಖಲೆಯ ಮೊಟ್ಟೆ ಉತ್ಪಾದನೆ ಮಾಡಿದ ಮಾದರಿ ರೈತ. ವಿದರ್ಭದಲ್ಲಿರುವ ಏಕೈಕ ಕೋಳಿ ಫಾರಂ ಇವರದಾಗಿದೆ. ಪರಿಸರ ಸ್ನೇಹಿ ಮಾತೋಶ್ರೀ ಪೌಲ್ಟ್ರಿ ಫಾರಂ ವಿದರ್ಭದಲ್ಲಿ ಅತ್ಯಂತ ಮುಂದುವರಿದ ಕೋಳಿ ಫಾರಂ ಆಗಿದೆ.
ಕೃಷಿಗೆ ಪೂರಕವಾಗಿ ರವೀಂದ್ರ ಮೇಟ್ಕರ್ ಆರಂಭಿಸಿದ ಕೋಳಿ ಫಾರಂ ವ್ಯಾಪಾರ ಇದೀಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ಕೃಷಿ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದೆ. ರವೀಂದ್ರ ಮೇಟ್ಕರ್ ಅವರು ತಮ್ಮ ಕೋಳಿ ಸಾಕಣೆ ವ್ಯವಹಾರದ ಮೂಲಕ ಕೃಷಿಯಲ್ಲೂ ಆರ್ಥಿಕ ಸಮೃದ್ಧಿ ಪಡೆಯಬಹುದು ಎಂಬುದನ್ನು ನಿರೂಪಿಸಿ, ವಿದರ್ಭದ ರೈತರಿಗೆ ಆದರ್ಶವಾಗಿದ್ದಾರೆ.
ಅತ್ಯಾಧುನಿಕ ಕೋಳಿ ಫಾರಂ: ಕಳೆದ 37 ವರ್ಷಗಳಿಂದ ಕೋಳಿ ವ್ಯಾಪಾರ ನಡೆಸುತ್ತಿರುವ ರವೀಂದ್ರ ಮೇಟ್ಕರ್ ಅವರು ಈ ವರ್ಷದ ಆಗಸ್ಟ್‌ನಲ್ಲಿ ಅಮರಾವತಿಯಿಂದ ಅಂಜನಗಾಂವ್ ಬಾರಿ ರಸ್ತೆಯಲ್ಲಿರುವ ತಮ್ಮ ಜಮೀನಿನಲ್ಲಿ ಅತ್ಯಾಧುನಿಕ ಕೋಳಿ ಫಾರಂ ಸ್ಥಾಪಿಸಿದ್ದಾರೆ. ಈ ಕೋಳಿ ಫಾರಂ ಸ್ವಯಂಚಾಲಿತ ಉಪಕರಣಗಳನ್ನು ಹೊಂದಿದೆ. ಈ ಸ್ಥಳದಲ್ಲಿ 30,500 ಕೋಳಿಗಳಿದ್ದು, ಒಂದು ಗುಂಡಿ ಒತ್ತಿದರೆ ಯಂತ್ರದ ಮೂಲಕ ಎಲ್ಲ ಕೋಳಿಗಳಿಗೆ ಆಹಾರ ಸರಬರಾಜಾಗುತ್ತದೆ.
ಅಲ್ಲದೇ, ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಕೋಳಿ ಹಿಕ್ಕೆಗಳನ್ನು ಸಹ ಶೆಡ್‌ನಿಂದ ತೆಗೆದುಹಾಕಲಾಗುತ್ತದೆ. ಕೋಳಿಗಳು ಹಾಕಿದ ಮೊಟ್ಟೆಗಳನ್ನು ಯಂತ್ರದ ಸಹಾಯದಿಂದಲೇ ಸ್ವಯಂಚಾಲಿತವಾಗಿ ಒಂದೇ ಸ್ಥಳದಲ್ಲಿ ಸಂಗ್ರಹಿಸಿ, ಇಬ್ಬರು ಮಹಿಳೆಯರ ಸಹಾಯದಿಂದ ಒಂದು ಟ್ರೇನಲ್ಲಿ ಠೇವಣಿ ಮಾಡಲಾಗುತ್ತದೆ. ಈ ಕೋಳಿ ಶೆಡ್‌ಗಳಿಗೆ ಸರಿಯಾದ ತಾಪಮಾನವನ್ನು ನಿರ್ವಹಿಸಲು ಹವಾನಿಯಂತ್ರಣ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ಕೋಳಿಗಳ ಉತ್ತಮ ಆರೋಗ್ಯಕ್ಕಾಗಿ ಫಾರಂ ಅನ್ನು ಯಾವಾಗಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಈ ಎಲ್ಲ ಸೌಲಭ್ಯಗಳಿಂದಾಗಿ ಕೋಳಿಗಳು ಮೊಟ್ಟೆ ಇಡುವ ಸಾಮರ್ಥ್ಯ ಶೇಕಡಾ ಮೂರಿಂದ ನಾಲ್ಕು ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ರವೀಂದ್ರ ಮೇಟ್ಕರ್ ಹೆಮ್ಮೆಯಿಂದ 'ಈಟಿವಿ ಭಾರತ್' ತಿಳಿಸಿದರು.
ಮಧ್ಯಪ್ರದೇಶದಲ್ಲಿ ಮೊಟ್ಟೆಗೆ ಭಾರಿ ಬೇಡಿಕೆ: ಮೊಟ್ಟೆ ಮಾರಾಟ ಮಾಡಲು ನಮಗೆ ಹೆಚ್ಚಿನ ತೊಂದರೆ ಇಲ್ಲ. ನಮ್ಮ ಕೋಳಿ ಫಾರಂನಿಂದ ಮೊಟ್ಟೆಗಳನ್ನು ಮಧ್ಯಪ್ರದೇಶದ ಭೋಪಾಲ್, ಖಾಂಡ್ವಾ, ಬೆರ್ಹಾನ್‌ಪುರ, ಇಂದೋರ್, ಝಾನ್ಸಿ ನಗರಗಳಿಗೆ ಕಳುಹಿಸಲಾಗುತ್ತದೆ. ಇದರೊಂದಿಗೆ ಗುಜರಾತ್‌ನ ಸೂರತ್ ನಗರಕ್ಕೆ ನಮ್ಮಿಂದ ನಿಯಮಿತವಾಗಿ ಮೊಟ್ಟೆಗಳನ್ನು ಕಳುಹಿಸಲಾಗುತ್ತದೆ ಎಂದು ರವೀಂದ್ರ ಮೆಟ್ಕರಿ ಮಾಹಿತಿ ನೀಡಿದರು.
ದಿನಕ್ಕೆ ಮೂರೂವರೆ ಲಕ್ಷ ರೂ. ಖರ್ಚು: ಈ ಅತ್ಯಾಧುನಿಕ ಕೋಳಿ ಫಾರಂ ಇಡೀ ವ್ಯವಸ್ಥೆಗೆ ಒಟ್ಟು 50 ನುರಿತ ಕೆಲಸಗಾರರನ್ನು ನೇಮಿಸಿಕೊಂಡಿದ್ದಾರೆ ರವೀಂದ್ರ ಅವರು. ಇದರೊಂದಿಗೆ ಕೋಳಿಗಳಿಗೆ ಆಹಾರದ ವ್ಯವಸ್ಥೆ ಮಾಡುವುದು, ಸ್ಥಳವನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಎಲ್ಲ ಕೆಲಸಗಳನ್ನು ಕಾರ್ಮಿಕರ ಮೂಲಕ ಸಹ ಮಾಡಲಾಗುತ್ತದೆ. ಕೋಳಿಗಳಿಗೆ ನಿತ್ಯ ಒಟ್ಟು 13 ಟನ್ ಮೇವು ನೀಡಲಾಗುತ್ತದೆ. ಕೋಳಿ ಮೇವು, ಕಾರ್ಮಿಕರ ಕೂಲಿಯೊಂದಿಗೆ ಒಂದು ದಿನದ ವ್ಯವಸ್ಥೆಗೆ ಸಂಪೂರ್ಣ ಮೂರೂವರೆ ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ರವೀಂದ್ರ ಮೇಟ್ಕರ್ ಹೇಳಿದರು.
ಕೋಳಿ ಹಿಕ್ಕೆ ಗೊಬ್ಬರವಾಗಿ ಬಳಕೆ: ಕೋಳಿ ಹಿಕ್ಕೆಗಳನ್ನು ಶೆಡ್‌ನಿಂದ ತೆಗೆದ ನಂತರ ಗೊಬ್ಬರವಾಗಿ ಬಳಸಲಾಗುತ್ತದೆ. ರವೀಂದ್ರ ಮೇಟ್ಕರ್ ಅವರು ತಮ್ಮ ಸ್ವಂತ ಜಮೀನಿನಲ್ಲಿ ಈ ಕೋಳಿ ಹಿಕ್ಕೆಗಳನ್ನು ಗೊಬ್ಬರವಾಗಿ ಬಳಸುತ್ತಾರೆ. ಈ ಗೊಬ್ಬರವನ್ನು ಇತರ ರೈತರಿಗೂ ಒಂದು ರೂಪಾಯಿ ಮತ್ತು ಹತ್ತು ಪೈಸೆ ದರದಲ್ಲಿ ಮಾರಾಟ ಮಾಡುತ್ತಾರೆ. ಕೋಳಿ ಹಿಕ್ಕೆಗಳು ಬೆಳೆಗಳಿಗೆ ಉತ್ತಮ ಗೊಬ್ಬರ ಎನ್ನುತ್ತಾರೆ ರವೀಂದ್ರ ಮೇಟ್ಕರ್.
ಹದಿನಾರನೇ ವಯಸ್ಸಿನಲ್ಲಿ ಫಾರಂ ಆರಂಭಿಸಿದ ರವೀಂದ್ರ: ರವೀಂದ್ರ ಮೇಟ್ಕರ್ ಅವರು 1984ರಲ್ಲಿ ತಮ್ಮ 16 ನೇ ವಯಸ್ಸಿನಲ್ಲಿ ತಮ್ಮ ಮನೆಯ ಛಾವಣಿಯ ಮೇಲೆ ಕೋಳಿ ಫಾರಂ ಆರಂಭಿಸಿ ವ್ಯಾಪಾರಕ್ಕೆ ತೊಡಗಿದ್ದರು. ಆ ಸಮಯದಲ್ಲಿ ಅವರ ಬಳಿ ಒಟ್ಟು ನೂರು ಕೋಳಿಗಳಿದ್ದವು. ತಮ್ಮ ವ್ಯಾಪಾರವನ್ನು ಮುಂದುವರಿಸುವ ಮೂಲಕ, ಅವರು ಕ್ರಮೇಣ ಈ ವ್ಯವಹಾರವನ್ನು ವಿಸ್ತರಿಸಿದರು. ನಂತರ ತಮ್ಮ ಜಮೀನಿನಲ್ಲಿ ಕೋಳಿ ಫಾರಂ ಪ್ರಾರಂಭಿಸಿದರು. ಇಂದು ಅವರ ಬಳಿ ದಿನಕ್ಕೆ ಒಂದು ಲಕ್ಷದ ಇಪ್ಪತ್ತು ಸಾವಿರ ಮೊಟ್ಟೆ ಇಡುವಷ್ಟು ಕೋಳಿಗಳಿವೆ.
ಹಲವು ಪ್ರಶಸ್ತಿಗಳನ್ನು ನೀಡಿ ಗೌರವ: ರವೀಂದ್ರ ಮೇಟ್ಕರ್ ಅವರ ಕೃಷಿ ಉದ್ಯಮವೇ ಆದ ಕೋಳಿ ಸಾಕಾಣಿಕೆಯನ್ನು ಗುರುತಿಸಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಅವರಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ 2021ರ ಜಗಜೀವನ್ ರಾಮ್ ಅಭಿನವ್ ಕಿಸಾನ್ ಪ್ರಶಸ್ತಿ ಮತ್ತು ಜಗಜೀವನ್ ರಾಮ್ ನವೀನ ರೈತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ದೇಶದಲ್ಲಿ ಒಟ್ಟು ಮೂರು ಮಂದಿ ಈ ಪ್ರಶಸ್ತಿ ಪಡೆದಿದ್ದು, ಈ ಹಿಂದೆ 2003ರಲ್ಲಿ ಮಹಾರಾಷ್ಟ್ರಕ್ಕೆ ಈ ಪ್ರಶಸ್ತಿ ಲಭಿಸಿತ್ತು. ಅದರ ನಂತರ ರವೀಂದ್ರ ಮೇಟ್ಕರ್ ಅವರು ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಪಡೆದರು. ಇದರೊಂದಿಗೆ ರವೀಂದ್ರ ಮೇಟ್ಕರ್ ಅವರು 2014ರಲ್ಲಿ ಮಹಾರಾಷ್ಟ್ರ ಸರ್ಕಾರದ ಕೃಷಿ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಇದನ್ನೂ ಓದಿ: ಗುಮ್ಮಟನಗರಿಗೆ ಕಾಲಿಟ್ಟ ಕಾಶ್ಮೀರಿ ಆ್ಯಪಲ್ : ಇದು ವಿಜಯಪುರ ರೈತನ ಯಶೋಗಾಥೆ