ಮುಂಬೈ: ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಹಣಕಾಸು ನೀತಿ ಸಮಿತಿಯ ಬಡ್ಡಿದರ ಪರಾಮರ್ಶೆ ಸಭೆ ಮುಕ್ತಾಯವಾಗಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತನ್ನ ರೆಪೋ ದರವನ್ನು ಮತ್ತೆ ಯಥಾವತ್ತಾಗಿ ಉಳಿಸಿಕೊಂಡಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಸದ್ಯ ರೆಪೋ ದರ ಶೇ.4ರಷ್ಟು ಹಾಗೂ ರಿವರ್ಸ್ ರೆಪೋ ದರ ಶೇ. 3.35 ರಷ್ಟಿದ್ದು, ಇದೇ ದರ ಮುಂದುವರೆಯಲಿದೆ. ಇದಕ್ಕೆ ಹಣಕಾಸು ನೀತಿ ಸಮಿತಿ (ಎಂಪಿಸಿ) ಅವಿರೋಧವಾಗಿ ಸಮ್ಮತಿ ಸೂಚಿಸಿದ್ದು, ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಕೋವಿಡ್-19 ಸಾಂಕ್ರಾಮಿಕದಿಂದಾಗಿ ಕುಸಿದಿದ್ದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ದೃಷ್ಟಿಯಿಂದ ಕಳೆದ ವರ್ಷ ಒಟ್ಟು 115 ಬೇಸಿಸ್ ಪಾಯಿಂಟ್ ರೆಪೋ ದರವನ್ನು ಆರ್‌ಬಿಐ ಕಡಿತಗೊಳಿಸಿತ್ತು. ಆ ಬಳಿಕ ಸತತವಾಗಿ ಆರು ಬಾರಿ ಬಡ್ಡಿದರದಲ್ಲಿ ಬದಲಾವಣೆ ಮಾಡಿಲ್ಲ. ಮತ್ತೆ ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದ್ದು, 2021-22ರ ಹಣಕಾಸು ವರ್ಷದಲ್ಲಿ ಎರಡನೇ ಬಾರಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ರೆಪೋ - ರಿವರ್ಸ್ ರೆಪೋ ದರ
ವಾಣಿಜ್ಯ ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು 'ರೆಪೋ ದರ' ಎನ್ನುತ್ತಾರೆ. ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಬಳಸುವ ಮಾರ್ಗ ಇದಾಗಿದೆ. ರೆಪೋ ದರ ಕಡಿಮೆ ಇದ್ದರೆ, ಅಂದರೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿದರೆ ಬ್ಯಾಂಕ್ಗಳು ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆಯುತ್ತದೆ.
ಆರ್‌ಬಿಐನಲ್ಲಿ ಬ್ಯಾಂಕುಗಳಿಡುವ ಹಣಕ್ಕೆ ನೀಡುವ ಬಡ್ಡಿ ದರಕ್ಕೆ ರಿವರ್ಸ್ ರೆಪೊ ದರ ಎನ್ನಲಾಗುವುದು.