ಹೈದರಾಬಾದ್ (ತೆಲಂಗಾಣ) : ಹೆತ್ತಮ್ಮನ ಸಹಾಯದಿಂದಲೇ 9 ವರ್ಷದ ಅವಳಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಲಾಗಿದೆ. ಇದೀಗ ತಾಯಿ ಸೇರಿದಂತೆ ಐವರು ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ತೆಲಂಗಾಣದ ಹೈದರಾಬಾದ್‌ನ ಮೈಲಾರದೇವಪಲ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಮೈಲಾರದೇವಪಲ್ಲಿಯಲ್ಲಿ ವಾಸವಾಗಿರುವ ಆರೋಪಿ ಮಹಿಳೆಯೊಂದಿಗೆ ಸೈಯದ್ ಜಾಫರ್ (45), ಪ್ರದೀಪ್ ಅಗರ್‌ವಾಲ್ (40), ಸಂತೋಷ್ ಕುಮಾರ್ (29) ಮತ್ತು ರಾಹುಲ್ ಮಂಡಲ್ (25) ಎಂಬುವರು ಸ್ನೇಹ ಬೆಳೆಸಿದ್ದರು. 2016ರಲ್ಲಿ ಮಹಿಳೆಯ ಅವಳಿ ಹೆಣ್ಣು ಮಕ್ಕಳ ಮೇಲೆ ಇವರು ಅತ್ಯಾಚಾರ ಎಸಗಿದ್ದರು. ಇದಕ್ಕೆ ತಾಯಿಯೇ ಸಹಾಯ ಮಾಡಿದ್ದರು.
ಇದನ್ನೂ ಓದಿ: ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ
ಈ ಸಂಬಂಧ ರಂಗಾರೆಡ್ಡಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸೂಚನೆ ಮೇರೆಗೆ ಜಿಲ್ಲಾ ಮಕ್ಕಳ ಕಲ್ಯಾಣಾಧಿಕಾರಿ ಮೈಲಾರದೇವಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಮಗ್ರ ಸಾಕ್ಷಿಯೊಂದಿಗೆ ದೋಷಾರೋಪ ಪಟ್ಟಿಯನ್ನು ಐವರ ವಿರುದ್ಧ ಸೈಬರಾಬಾದ್ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್, ಪೋಕ್ಸೋ ಕಾಯ್ದೆಯಡಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ. ಆರೋಪಿ ತಾಯಿಗೆ 20 ಸಾವಿರ ರೂ. ದಂಡ, ಇತರ ನಾಲ್ವರು ಆರೋಪಿಗಳಿಗೆ ತಲಾ 35 ಸಾವಿರ ರೂ. ದಂಡ ಸೇರಿ ಐವರಿಗೂ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.