ಕಥುವಾ/ಜಮ್ಮು-ಕಾಶ್ಮೀರ : ರಂಜಿತ್ ಸಾಗರ್ ಅಣೆಕಟ್ಟೆ ಬಳಿ ಅಪಘಾತಕ್ಕೀಡಾದ ಸೇನಾ ಹೆಲಿಕಾಪ್ಟರ್‌ನ ಸಹ-ಪೈಲಟ್‌ನ ಮೃತ ದೇಹವನ್ನು ಘಟನೆ ನಡೆದ 75 ದಿನಗಳ ನಂತರ ಸೇನೆಯು ಭಾನುವಾರ ಪತ್ತೆ ಮಾಡಿದೆ.
ರಕ್ಷಣಾ ಇಲಾಖೆಯ ಹೇಳಿಕೆಯ ಪ್ರಕಾರ, ಆಗಸ್ಟ್ 10ರಂದು ರಂಜಿತ್ ಸಾಗರ್ ಅಣೆಕಟ್ಟಿನಲ್ಲಿ ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನ ಎರಡನೇ ಪೈಲಟ್ ಕ್ಯಾಪ್ಟನ್ ಜಯಂತ್ ಜೋಶಿಯವರ ಶವವನ್ನು ಹೊರ ತೆಗೆಯಲು ಭಾರತೀಯ ಸೇನೆ ಮತ್ತು ನೌಕಾಪಡೆಯು 75 ದಿನಗಳ ಕಾಲ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ. ಅತ್ಯಾಧುನಿಕ ಸಾಧನಗಳನ್ನು ಬಳಸಿ ಪೈಲಟ್ಗಳ ಶವಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿತ್ತು.
ಅಣೆಕಟ್ಟೆಯ ವಿಸ್ತಾರ ಮತ್ತು ಆಳದಿಂದಾಗಿ, ಶೋಧ ಮತ್ತು ರಕ್ಷಣಾ ತಂಡವು ಅತ್ಯಾಧುನಿಕ ಮಲ್ಟಿ-ಬೀಮ್ ಸೋನಾರ್ ಉಪಕರಣವನ್ನು ಸರೋವರವನ್ನು ಸ್ಕ್ಯಾನ್ ಮಾಡಲು ಬಳಸುತ್ತಿತ್ತು ಮತ್ತು ರೋಬೋಟ್ ಅನ್ನು ಬಳಸಿ ಹುಡುಕಲು ಆರಂಭಿಸಲಾಯಿತು. ಭಾನುವಾರ ಇದೇ ರೀತಿಯ ಶೋಧದ ಸಮಯದಲ್ಲಿ, ದೇಹವನ್ನು 65-70 ಮೀಟರ್ ಆಳದಲ್ಲಿ ಪತ್ತೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
ಸ್ಥಳೀಯ ವೈದ್ಯಕೀಯ ಪರೀಕ್ಷೆಯ ನಂತರ ಮೃತದೇಹವನ್ನು ಹೆಚ್ಚಿನ ಪರೀಕ್ಷೆಗಾಗಿ ಪಠಾಣ್‌ಕೋಟ್ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಭಾರತೀಯ ಸಶಸ್ತ್ರ ಪಡೆಗಳು ಕರ್ತವ್ಯದ ವೇಳೆ ಅತ್ಯುನ್ನತ ತ್ಯಾಗ ಮಾಡಿದ ಯುವ ಪೈಲಟ್ ಕ್ಯಾಪ್ಟನ್ ಜಯಂತ್ ಜೋಶಿಯವರ ಶವವನ್ನು ಪಡೆಯಲು ಚಳಿ, ಮಳೆ ಲೆಕ್ಕಿಸದೇ ಅಣೆಕಟ್ಟೆಯಲ್ಲಿ ಕಾರ್ಯಾಚರಣೆ ಕೈಗೊಂಡವು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ ಮತ್ತು ಇಂಥ ದುಃಖತಪ್ತ ಸಮಯದಲ್ಲಿ ಭಾರತೀಯ ಸೇನೆಯು ಕ್ಯಾಪ್ಟನ್ ಜಯಂತ್ ಜೋಶಿಯವರ ಕುಟುಂಬದ ಹೆಗಲಿಗೆ ನಿಂತಿದೆ.