ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನೆ ಮುಂದೆ ಹನುಮಾನ್ ಚಾಲೀಸಾ ಪಠಿಸುವ ಸವಾಲು ಹಾಕಿದ್ದ ಶಾಸಕ ರವಿ ರಾಣಾ ಹಾಗೂ ಅವರ ಪತ್ನಿ ಅಮರಾವತಿ ಸಂಸದೆ ನವನೀತ್ ಕೌರ್ ಅವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ತನಿಖೆ ಚುರುಕುಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಸೆಷನ್ಸ್ ಕೋರ್ಟ್ನಿಂದ ಈ ದಂಪತಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ಶನಿವಾರ ಶಾಸಕ ರವಿ ರಾಣಾ ಹಾಗೂ ಸಂಸದೆ ನವನೀತ್ ಕೌರ್ ಅವರನ್ನು ಖಾರ್ ಪೊಲೀಸರು ಬಂಧಿಸಿದ ನಂತರ ಮುಂಬೈ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆದಿಲ್ಲ. ಏಪ್ರಿಲ್ 29ರಂದು ಅರ್ಜಿ ವಿಚಾರಣೆ ನಡೆಯಲಿದ್ದು, ರಾಣಾ ದಂಪತಿಯ ಜೈಲು ವಾಸ ಮುಂದುವರೆದಿದೆ.
ಪ್ರಕರಣದ ವಿಚಾರಣೆ ವೇಳೆ, ರಾಣಾ ಪರ ವಕೀಲ ರಿಜ್ವಾನ್ ಮರ್ಚೆಂಟ್ ಜಾಮೀನು ಬಗ್ಗೆ ಕೋರಿದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘರತ್ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದರು. ಮೊದಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ (ಬಾಂದ್ರಾ ನ್ಯಾಯಾಲಯ) ಅರ್ಜಿಯನ್ನು ಹಿಂಪಡೆಯಬೇಕು, ನಂತರ ಇಲ್ಲಿ ವಿಚಾರಣೆ ನಡೆಸಬೇಕು ಎಂದು ಪ್ರಾಸಿಕ್ಯೂಟರ್‌ಗಳು ಒತ್ತಾಯಿಸಿದರು. ಈ ಹಿನ್ನೆಲೆ ರಾಣಾ ಪರ ಪ್ರಾಸಿಕ್ಯೂಟರ್ ಏಪ್ರಿಲ್ 27 ರಂದು ಮುಂಬೈ ಸೆಷನ್ಸ್ ನ್ಯಾಯಾಲಯದಲ್ಲಿ ತಮ್ಮ ರಿಟ್ ಅರ್ಜಿಯನ್ನು ಸಲ್ಲಿಸಲಿದ್ದು, ಏಪ್ರಿಲ್ 29 ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ಕೋಮು ಗಲಭೆ: ತನಿಖೆಗೆ ನ್ಯಾಯಾಂಗ ಆಯೋಗ ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ
ಬಾಂದ್ರಾ ನ್ಯಾಯಾಲಯದಿಂದ ಅರ್ಜಿಯನ್ನು ಹಿಂಪಡೆಯುತ್ತಿರುವುದಾಗಿ ದಂಪತಿಗಳ ಪರ ವಕೀಲ ರಿಜ್ವಾನ್ ಮರ್ಚೆಂಟ್ ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸಂಸದ ನವನೀತ್ ರಾಣಾ ಹಾಗೂ ಶಾಸಕ ರವಿ ರಾಣಾ ಅವರು ಏಪ್ರಿಲ್ 29ರವರೆಗೆ ಜೈಲಿನಲ್ಲೇ ಇರಬೇಕಾಗುತ್ತದೆ.