ಬೇಗುಸರಾಯ್/ಬಿಹಾರ: ಜಿಲ್ಲಾ ಕೇಂದ್ರದಿಂದ 32 ಕಿ.ಮೀ ದೂರದಲ್ಲಿರುವ ಖೋದವಂದಪುರ ಪೊಲೀಸ್ ಠಾಣೆಯ ತಾರಾ ಬರಿಯಾರ್‌ಪುರದ ನಿವಾಸಿ ರಾಮ್ ಪುಕಾರ್ ಪಂಡಿತ್ ತನ್ನ ಕುಟುಂಬವನ್ನು ಸಾಕಲು ಹುಟ್ಟೂರು ತೊರೆದು ಸುಮಾರು 1100 ಕಿ.ಮೀ ದೂರದ ದೆಹಲಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ರು. ಅದೇ ಸಮಯದಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿ ದೆಹಲಿಯಲ್ಲಿ ಲಾಕ್ಡೌನ್ ಘೋಷಣೆಯಾಯ್ತು. ಇದರಿಂದಾಗಿ ಸಾವಿರಾರು ಕುಟುಂಬಗಳು ತಮ್ಮ ಮನೆಗಳಿಗೆ ಕಾಲ್ನಡಿಗೆಯಲ್ಲಿ ಹೊರಟರು. ಇವರಲ್ಲಿ ರಾಮ್ ಪುಕಾರ್ ಸಹ ಒಬ್ಬರು.
ಹಣ ಕಸಿದುಕೊಂಡು ದುಷ್ಕರ್ಮಿಗಳು ಪರಾರಿ:
ಲಾಕ್ಡೌನ್ ಸಮಯದಲ್ಲಿ, ರಾಮ್ ಪುಕಾರ್ ಅವರ ಏಕೈಕ ಪುತ್ರ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಪತ್ನಿ ಅವರಿಗೆ ಕರೆ ಮಾಡಿದರು. ಸಾರಿಗೆ ಸಂಚಾರ ನಿಷೇಧಗೊಂಡಿದ್ದ ಕಾರಣ ಅವರು ದೆಹಲಿಯಿಂದ ಕಾಲ್ನಡಿಗೆಯಲ್ಲಿ ತಮ್ಮ ಹಳ್ಳಿಯ ಕಡೆಗೆ ಹೊರಟರು. ಆದರೆ ದೆಹಲಿಯ ಗಡಿ ದಾಟುವಾಗ ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಕಷ್ಟಪಟ್ಟು ಗಳಿಸಿದ ಸುಮಾರು 5 ಸಾವಿರ ರೂಪಾಯಿಗಳನ್ನು ಸಹ ಕೆಲವು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾದರು. ಇನ್ನು ನಡೆದುಕೊಂಡು ಹೋಗಲು ಕೊರೊನಾ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರಿಂದ ಏಟು ತಿನ್ನಬೇಕಾಯ್ತು.
ಮಗನ ಸಾವು:
ಈ ಮಧ್ಯೆ ಅನಾರೋಗ್ಯದಿಂದ ಬಳಲುತ್ತಿದ್ದ ಮಗ ತೀರಿಕೊಂಡನೆಂಬ ಆಘಾತಕಾರಿ ಸುದ್ದಿಯೊಂದು ಸಿಡಿಲಿನಂತೆ ಬಂದೆರಗಿತು. ಆ ವೇಳೆ ರಾಮ್ ನನನ್ನು ಮನೆಗೆ ಕಳುಹಿಸಿ ಎಂದು ಅಧಿಕಾರಿಗಳ ಬಳಿ ಗೋಗೆರೆದರೂ, ಯಾರಿಂದಲೂ ಉತ್ತಮ ಸ್ಪಂದನೆ ದೊರೆಯಲಿಲ್ಲ. ನಂತರ ರಾಮ್ ಪುಕಾರ್ ಬೀದಿ - ಬೀದಿಗಳಲ್ಲಿ ಕುಳಿತು ಅಳಲು ಆರಂಭಿಸಿದರು. ಇವರು ಅಳುವ ಫೋಟೋ ತೆಗೆದು ಯಾರೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು. ಫೋಟೋ ವೈರಲ್ ಆಯಿತು. ಇದನ್ನು ಕಂಡ ಅನೇಕ ಸಹೃದಯಿಗಳು ರಾಮ್ ಪುಕಾರ್ ಪರಿಸ್ಥಿತಿ ಕಂಡು ಮರುಗಿದರು. ಅವರು ಊರಿಗೆ ತೆರಳಲು ಧನಸಹಾಯ ಮಾಡಿದ್ರು. ಸಾವಿರಾರು ಮಂದಿ ನೀಡಿದ ಆರ್ಥಿಕ ನೆರವಿನಿಂದ ಊರಿಗೆ ವಾಪಸ್ ಆದ ರಾಮ್ ಇದೀಗ ಊರಿನಲ್ಲೇ ಮನೆಯೊಂದನ್ನು ಕಟ್ಟಿಕೊಂಡು ಇಲ್ಲಿ ಸ್ವಲ್ಪ ಭೂಮಿ ಖರೀಸಿದರು. ಜೊತೆಗೆ ಇಲ್ಲಿಯೇ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಈ ನೋವಿನ ಕಥೆ ನೆನೆಯುವಾಗ ರಾಮ್ ಪುಕಾರ್ ಕೈಗಳು ನಡುಗುತ್ತವೆ. ಕಣ್ಣಿನಲ್ಲಿ ನೀರು ಜಿನುಗುತ್ತದೆ. ಲಾಕ್ಡೌನ್ನ ಕರಾಳ ದಿನಗಳು ಕಣ್ಮುಂದೆ ಬಂದರೆ ಸಾಕು ರಾಮ್ ಪುಕಾರ್ ದಂಪತಿಯ ಕಣ್ಣು ತೇವವಾಗುತ್ತದೆ. ಹೀಗಾಗಿ ಇವರು ಎಂದಿಗೂ ಮತ್ತೆ ದೆಹಲಿಗೆ ತೆರಳುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ. ಮಗನನ್ನು ಕಳೆದುಕೊಳ್ಳುವಂತೆ ಮಾಡಿದ ಕೊರೊನಾ ಇವರ ಪಾಲಿನ ಪರಮವೈರಿಯಾಗಿ ಎಂದಿಗೂ ಮಾಸದ ದುಃಖವೊಂದನ್ನು ಉಳಿಸಿಬಿಟ್ಟಿದೆ.