ಹೈದರಾಬಾದ್ (ತೆಲಂಗಾಣ): ರಾಮೋಜಿ ಗ್ರೂಪ್ ವಿರುದ್ಧ ಜಿ.ಯೂರಿ ರೆಡ್ಡಿ ಎಂಬವರು ಮಾಡಿರುವ ಆರೋಪಗಳನ್ನು ಸಂಸ್ಥೆಯು ಸಂಪೂರ್ಣವಾಗಿ ಅಲ್ಲಗಳೆದಿದೆ. ಹೈದರಾಬಾದ್‌ನಲ್ಲಿ ನೆಲೆಸಿರುವ ವ್ಯಕ್ತಿ ತೆಲಂಗಾಣದ ಕಂಪನಿಗಳ ರಿಜಿಸ್ಟ್ರಾರ್ ಅಥವಾ ಹೈದರಾಬಾದ್‌ನ ರಾಷ್ಟ್ರೀಯ ಕಂಪನಿಗಳ ನ್ಯಾಯಾಧೀಕರಣ ಅಥವಾ ತೆಲಂಗಾಣ ಪೊಲೀಸರನ್ನು ಸಂಪರ್ಕಿಸುವ ಬದಲು ಆಂಧ್ರಪ್ರದೇಶದ ಸಿಐಡಿಯನ್ನು ಸಂಪರ್ಕಿಸಿದ್ದೇಕೆ ಎಂಬ ಮೂಲಭೂತ ಪ್ರಶ್ನೆಗಳನ್ನು ಸಂಸ್ಥೆ ಎತ್ತಿದೆ.
ಯೂರಿ ರೆಡ್ಡಿ ಅವರು ಮಾರ್ಗದರ್ಶಿ ಚಿಟ್ ಫಂಡ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಮಾಜಿ ಹೂಡಿಕೆದಾರರಾಗಿದ್ದ ಗಾದಿ ರೆಡ್ಡಿ ಜಗನ್ನಾಥ ರೆಡ್ಡಿ ಎಂಬವರ ಪುತ್ರ. ಇವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದು ರಾಮೋಜಿ ಗ್ರೂಪ್ ಅನ್ನು ಟಾರ್ಗೆಟ್ ಮಾಡುವ ಆಂಧ್ರ ಪ್ರದೇಶ ಸರ್ಕಾರದ ಮತ್ತೊಂದು ಪ್ರಯತ್ನ ಎಂದು ಸಂಸ್ಥೆ ಹೇಳಿದೆ.
ಮಾರ್ಗದರ್ಶಿ ಚಿಟ್ ಫಂಡ್‌ಗಳಲ್ಲಿನ ತಮ್ಮ ಕುಟುಂಬದ ಷೇರುಗಳನ್ನು ರಾಮೋಜಿ ಗ್ರೂಪ್ ಅಧ್ಯಕ್ಷ ರಾಮೋಜಿ ರಾವ್ ಅವರು 'ಬಲವಂತ' ಮತ್ತು 'ಬೆದರಿಕೆ'ಯ ಮೂಲಕ ಬದಲಾಯಿಸಿದ್ದಾರೆ ಎಂದು ಯೂರಿ ರೆಡ್ಡಿ ಮಂಗಳವಾರ ಆರೋಪಿಸಿದ್ದರು. ಈ ಆರೋಪಗಳನ್ನು ರಾಮೋಜಿ ಗ್ರೂಪ್ ಸ್ಪಷ್ಟವಾಗಿ ಸೂಕ್ತ ಕಾರಣಗಳೊಂದಿಗೆ ತಳ್ಳಿಹಾಕಿದೆ. ''ಆಂಧ್ರದ ಸಿಐಡಿ ಇನ್ನೊಂದು ದೊಡ್ಡ ಕಥೆ ಹೆಣೆದಿದೆ. ಜಿ.ಯೂರಿ ರೆಡ್ಡಿ ಅವರನ್ನು ಕೈಗೊಂಬೆಯಾಗಿ ಬಳಸಿಕೊಂಡು ದೂರು ದಾಖಲಿಸಿದೆ'' ಎಂದು ಸಂಸ್ಥೆ ತಿಳಿಸಿದೆ.
"ನಾನು ಉತ್ತರ ಪ್ರದೇಶದ ನೋಯ್ಡಾದಲ್ಲಿ ನೆಲೆಸಿದ್ದೆ. ಪ್ರಸ್ತುತ ಹೈದರಾಬಾದ್‌ನಲ್ಲಿ ನೆಲೆಸಿದ್ದೇನೆ ಎಂದು ದೂರುದಾರರು ಹೇಳಿದ್ದಾರೆ. ಈ ಹೇಳಿಕೆಯಂತೆ ಮಾರ್ಗದರ್ಶಿ ಚಿಟ್ ಫಂಡ್ ಅಧ್ಯಕ್ಷ ರಾಮೋಜಿ ರಾವ್ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಅವರ ಮಾನಹಾನಿ ಮಾಡುವ ಏಕೈಕ ದುರುದ್ದೇಶದಿಂದ ಹೊಸ ಎಫ್‌ಐಆರ್ ದಾಖಲಿಸಲು ಆಂಧ್ರ ಸರ್ಕಾರ ದೂರುದಾರರನ್ನು ಬಳಸಿಕೊಂಡಿದೆ. ಆಂಧ್ರದ ಸಿಐಡಿಯೊಂದಿಗೆ ಸೇರಿಕೊಂಡು ಕಂಪನಿಯ ಘನತೆಗೆ ಕಳಂಕ ತರಲು ದೊಡ್ಡ ಪಿತೂರಿ ರೂಪಿಸಲಾಗಿದೆ'' ಎಂದು ರಾಮೋಜಿ ಗ್ರೂಪ್ ಗುರುವಾರ ಹೇಳಿಕೆ ಬಿಡುಗಡೆ ಮಾಡಿದೆ.
''ಈ ದೂರು ಸಂಪೂರ್ಣ ಸುಳ್ಳು ಮತ್ತು ಕಾಲ್ಪನಿಕ ಆರೋಪಗಳಿಂದ ಕೂಡಿದೆ. ಸತ್ಯಕ್ಕೆ ಸಂಪೂರ್ಣವಾಗಿ ವಿರುದ್ಧ. ಈ ವರ್ಷದ ಅಕ್ಟೋಬರ್ 10ರಂದು ದಾಖಲಿಸಲಾದ ಎಫ್‌ಐಆರ್ ಮತ್ತು 2017ರಲ್ಲಿ ದೂರುದಾರರ ಮೂಲ ದೂರಿನ ನಡುವೆ ಹಲವಾರು ವ್ಯತಿರಿಕ್ತಗಳಿವೆ. ಇದಕ್ಕೆ ಸಂಸ್ಥೆಯು ಪ್ರತ್ಯುತ್ತರ ನೀಡಿದೆ. ಇದಕ್ಕೆ ಅವರು ಅಜಾಗರೂಕತೆಯಿಂದ ವರ್ಗಾವಣೆ ಫಾರ್ಮ್‌ಗೆ (5H-4) ಸಹಿ ಮಾಡಿದ್ದಾರೆ ಎಂದು ಹೇಳಿದ್ದರು. ಆಂಧ್ರದ ಸಿಐಡಿಯೊಂದಿಗೆ ಕೈಜೋಡಿಸಿ ದೂರುದಾರರು ಹೊಸ ಕಥೆ ಹೆಣೆದಿದ್ದಾರೆ'' ಎಂದು ರಾಮೋಜಿ ಗ್ರೂಪ್ ಹೇಳಿದೆ.
ಷೇರು ವರ್ಗಕ್ಕೆ ಒಪ್ಪಿಗೆ ನೀಡಿದ್ದ ದೂರುದಾರ: ''ಷೇರುಗಳ ವರ್ಗಾವಣೆಯ ಆರೋಪ ಮಾಡಿರುವ ಯೂರಿ ರೆಡ್ಡಿ ಮತ್ತು ಅವರ ಸಹೋದರರು ಸ್ವಯಂಪ್ರೇರಿತವಾಗಿ ಒಪ್ಪಿಕೊಂಡಿದ್ದಾರೆ. ಕಂಪನಿಯ ಷರತ್ತುಗಳಿಗೆ ಅವರು ಸಹಿ ಹಾಕಿದ್ದಾರೆ. ಅನುಕೂಲ ಮಾಡಿಕೊಟ್ಟಿದ್ದಕ್ಕೆ ರಾಮೋಜಿ ರಾವ್ ಅವರಿಗೆ ಕೃತಜ್ಞತೆಗಳನ್ನೂ ಸಲ್ಲಿಸಿದ್ದಾರೆ. ಈ ಬಗ್ಗೆ ಅವರು ಇಮೇಲ್ ಮಾಡಿದ್ದಾರೆ. ಯೂರಿ ರೆಡ್ಡಿ ಈಗ ಮಾಡಿರುವ ಆರೋಪ ಮತ್ತು ಅಂದು ಕಂಪನಿಯ ಜತೆಗೆ ನಡೆದುಕೊಂಡಿದ್ದು ಭಿನ್ನವಾಗಿದೆ. ಷೇರುಗಳು ಮತ್ತು ಅವುಗಳ ಮೌಲ್ಯದ ಬಗ್ಗೆ ತಿಳಿದಿದ್ದೇ ಕಂಪನಿಯ ಪತ್ರಗಳಿಗೆ ಸಹಿ ಮಾಡಿದ್ದಾರೆ'' ಎಂದು ರಾಮೋಜಿ ಗ್ರೂಪ್ ಹೇಳಿದೆ.
''ಕಳೆದ ಆರು ದಶಕಗಳಿಂದ ವ್ಯವಸ್ಥಿತ ಕಾರ್ಯವಿಧಾನವನ್ನು ಕಾಪಾಡಿಕೊಂಡು ಕಂಪನಿಯ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ದುರುದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಲಾಗಿದೆ. ಹಾಗೊಂದು ವೇಳೆ ದೂರುದಾರರಿಗೆ ಅನ್ಯಾಯವಾಗಿದೆ ಎಂದೆನಿಸಿದಲ್ಲಿ ಕಾನೂನಿನಡಿ ಅರ್ಹ ವೇದಿಕೆಯನ್ನು ಸಂಪರ್ಕಿಸಬೇಕಿತ್ತು. ಅಂದರೆ, ಕಂಪನಿಗಳ ರಿಜಿಸ್ಟ್ರಾರ್, ಎನ್ಸಿಎಲ್ಟಿ ಮೊರೆ ಹೋಗಬೇಕಿತ್ತು. ಇದೆಲ್ಲ ಬಿಟ್ಟು ಅವರು ಆಂಧ್ರಪ್ರದೇಶ ಸಿಐಡಿಗೆ ದೂರು ನೀಡಿದ್ದಾರೆ. ಇದೆಲ್ಲವೂ ಕಂಪನಿಯ ಮಾನಹಾನಿಗೆ ಸಂಚು ರೂಪಿಸಲಾಗಿದೆ ಎಂಬುದನ್ನು ಸಾಬೀತು ಮಾಡುತ್ತವೆ'' ಎಂದಿದೆ.
''ಯೂರಿ ರೆಡ್ಡಿ ಅವರು ತಮ್ಮ ಸಹೋದರನಿಗೆ ಷೇರುಗಳನ್ನು ವರ್ಗಾಯಿಸಲು ಅಫಿಡವಿಟ್ ಮೂಲಕ ಮನವಿ ಮಾಡಿದ್ದರು. ಇದರಲ್ಲಿ 2013 ರ ಕಂಪನಿಯ ಕಾಯ್ದೆಯ ನಿಬಂಧನೆಗಳನ್ನು ಪಾಲಿಸಲಾಗಿದೆ. ಅದರ ಪ್ರಕಾರ, ದೂರುದಾರರು 39,74,000 ಸಂಗ್ರಹವಾದ ಡಿವಿಡೆಂಡ್‌ಗಳ ಚೆಕ್ ಅನ್ನು ಎನ್‌ಕ್ಯಾಶ್ ಮಾಡಿದ್ದಾರೆ. ಇಬ್ಬರೂ ಸಹೋದರರು ಹೊಂದಿರುವ ಷೇರುಗಳ ಸದ್ಯದ ಸ್ಥಿತಿ ಮತ್ತು ಖಾತೆಯಲ್ಲಿ ಕ್ಲೈಮ್ ಮಾಡದ ಲಾಭಾಂಶದ ಬಗ್ಗೆ ತಿಳಿಸಲಾಗಿದೆ ಎಂಬುದು ಸತ್ಯ. ದೂರುದಾರರಿಗೆ ಈ ಬಗ್ಗೆ ಸಂಪೂರ್ಣ ಜ್ಞಾನವಿದೆ. ಅವರ ವಕೀಲರ ಜತೆಗೆ ಸಮಾಲೋಚಿಸಿದ ನಂತರ 2016 ರಲ್ಲಿ ಪ್ರಜ್ಞಾಪೂರ್ವಕವಾಗಿಯೇ ಒಪ್ಪಿಕೊಂಡಿದ್ದಾರೆ'' ಎಂದು ಕಂಪನಿ ಹೇಳಿದೆ.
ಕುತಂತ್ರದಿಂದ ದೂರು ದಾಖಲು: ''ಯೂರಿ ರೆಡ್ಡಿ ಕಾನೂನಿನಡಿ ಎಲ್ಲ ಪ್ರಕ್ರಿಯೆ ಮುಗಿಸಿದ ಬಳಿಕ ಯಾರದ್ದೋ ಕುತಂತ್ರದಿಂದ 2016 ರಲ್ಲಿ ವರ್ಗಾವಣೆದಾರರಿಂದ ಪಡೆದ 2,88,000 ರೂಪಾಯಿ ಮೊತ್ತದ ಚೆಕ್ ಹಿಡಿದಿಟ್ಟುಕೊಂಡರು. ಅವರದ್ದೇ ಆದ ಕಾರಣಗಳನ್ನು ನೀಡಿ ಕಂಪನಿಗೆ ಪತ್ರ ರವಾನಿಸಲಾಗಿದೆ. ಇದೆಲ್ಲವನ್ನೂ ಪರಿಶೀಲಿಸಿದ ಬಳಿಕ ಕಂಪನಿಯಿಂದ ಉತ್ತರ ಕೂಡ ನೀಡಲಾಗಿದೆ. ಈ 7 ವರ್ಷಗಳಲ್ಲಿ ಅವರು ಏನೊಂದನ್ನೂ ಪ್ರಶ್ನಿಸದೇ ಮೌನವಿದ್ದು, ಈಗ ಮೋಸವಾಗಿರುವ ಬಗ್ಗೆ ದೂರು ನೀಡಿದ್ದಾರೆ. ಅದೂ ಆಂಧ್ರದ ಸಿಐಡಿಗೆ. ಇದೆಲ್ಲವೂ ನಮ್ಮ ಕಂಪನಿಯ ವಿರುದ್ಧ ನಡೆದ ಕುತಂತ್ರ'' ಎಂದು ಸ್ಪಷ್ಟವಾಗಿ ಆಪಾದಿಸಿದೆ.
''ಷೇರುಗಳ ವರ್ಗದ ವೇಳೆ ಅವರು SH-4 ವರ್ಗಾವಣೆ ಫಾರ್ಮ್‌ಗೆ ಅಚಾನಕ್ಕಾಗಿ ಆಗಿ ಸಹಿ ಹಾಕಿದ್ದಾರೆ ಎಂದು ಹೇಳಿರುವುದು ಸಂಪೂರ್ಣ ಸುಳ್ಳಾಗಿದೆ. ಈಗ ನೀಡಿರುವ ದೂರಿನ ಭಾಗವನ್ನಾಗಿ ಮಾಡಲಾಗಿದೆ. 2015 ರಲ್ಲಿ ಅವರು ಒತ್ತಡ, ಪ್ರಭಾವವಿಲ್ಲದೇ, ಸ್ವಂತವಾಗಿ 288 ಷೇರುಗಳನ್ನು ವರ್ಗಾಯಿಸಲು SH4 ಫಾರ್ಮ್‌ಗೆ ಯೂರಿ ರೆಡ್ಡಿ ಸ್ವಯಂಪ್ರೇರಣೆಯಿಂದ ಸಹಿ ಮಾಡಿದ್ದರು'' ಎಂದಿದೆ ಕಂಪನಿ.
''ಯೂರಿ ರೆಡ್ಡಿ ಅವರು ರಾಮೋಜಿ ಗ್ರೂಪ್ನಿಂದ 39.74 ಲಕ್ಷ ರೂಪಾಯಿ ಲಾಭಾಂಶವನ್ನು ಪಡೆದುಕೊಂಡ ನಂತರ ಕಂಪನಿಯ ಮೇಲೆ ವಂಚನೆ ದೂರು ನೀಡಿದ್ದಾರೆ. 2015 ರಲ್ಲಿ (5 ಅಕ್ಟೋಬರ್ 2016) ಷೇರುಗಳ ವರ್ಗಾವಣೆಗೆ ಸಹೋದರಿಬ್ಬರೂ ಅವರ ವಕೀಲರ ಜತೆಗೆ ಸಂವಹನ ನಡೆಸಿದ ಬಳಿಕವಷ್ಟೇ ಸಹಿ ಹಾಕಿದ್ದಾರೆ. ಹೀಗಾಗಿ ಯೂರಿ ರೆಡ್ಡಿ ಮತ್ತು ಎಪಿಸಿಐಡಿಯ ಕಾನೂನು ದುರುಪಯೋಗದ ವಿರುದ್ಧ ಕಂಪನಿ ಹೋರಾಡಲಿದೆ'' ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಮಾರ್ಗದರ್ಶಿ ಚಿಟ್ ಫಂಡ್ ಪ್ರಕರಣ: ಆಂಧ್ರ ಸಿಐಡಿ ತನಿಖೆಗೆ ತಡೆ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ