ನವದೆಹಲಿ: ಭಾರತದಲ್ಲಿ ಬಹುಬೇಡಿಕೆ ಇರುವ ಬಿಸ್ಲೇರಿ ಬ್ರ್ಯಾಂಡ್ದ ಇತಿಹಾಸ 5 ವರ್ಷಗಳಷ್ಟು ಹಳೆಯದು.ರಮೇಶ್ ಚೌಹಾನ್ ಅವರು 28 ನೇ ವಯಸ್ಸಿನಲ್ಲಿ ಕೇವಲ 4 ಲಕ್ಷ ರೂಪಾಯಿಗಳಲ್ಲಿ ಬೀಸ್ಲೇರಿ ಕಂಪನಿ ಪ್ರಾರಂಭಿಸಿದರು. ಆದರೆ ಇಂದು ಈ ಕಂಪನಿಯ ವ್ಯವಹಾರ 7,000 ಕೋಟಿ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸುತ್ತಿದೆ. ಪ್ರಸ್ತುತ ಸಂಘಟಿತ ಮಾರುಕಟ್ಟೆಯಲ್ಲಿ ಅದರ ಪಾಲು ಸುಮಾರು 32 ಪ್ರತಿಶತ ತಲುಪಿದ್ದು, ದೇಶದ ನೀರಿನ ಬಾಟಲಿ ಉದ್ಯಮದಲ್ಲಿ ಬಹುದೊಡ್ಡ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.
ಬಿಸ್ಲೇರಿ ಕಂಪನಿ ವ್ಯವಹಾರದ ನನ್ನ ಪುತ್ರಿಗೆ ಇಷ್ಟವಿಲ್ಲವೆಂದು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನೊಂದಿಗೆ ರಮೇಶ್ ಚೌಹಾನ್ ಅವರು ಡೀಲ್ ಮಾಡಲು ನಿರ್ಧರಿಸಿದ್ದರು. ಆದರೆ ಟಿಸಿಪಿಎಲ್ ಒಪ್ಪಂದವು ವಿಫಲಗೊಂಡ ನಂತರ, ಬಿಸ್ಲೇರಿ ಕಂಪನಿ ಮುನ್ನೆಡೆಸುವುದಾಗಿ ಪುತ್ರಿ ಜಯಂತಿ ಅಂತಿಮವಾಗಿ ಒಪ್ಪಿಕೊಂಡಿದ್ದರು. ಬಿಸ್ಲೇರಿ ಬ್ರ್ಯಾಂಡ್ ಹುಟ್ಟುಹಾಕಿದ್ದ ರಮೇಶ್ ಚೌಹಾನ್ ಅವರಿಗೆ ಸದ್ಯ 82 ವರ್ಷ ವಯಸ್ಸಾಗಿದ್ದು, ಅವರು ತಮ್ಮ ಕಂಪನಿಯ ಅಧಿಕಾರವನ್ನು ಹೊಸ ಉತ್ತರಾಧಿಕಾರಿಗೆ ಹಸ್ತಾಂತರಿಸಲು ಬಯಸಿದ್ದಾರೆ. ಅವರ ಏಕೈಕ ಪುತ್ರಿ ಜಯಂತಿ ಚೌಹಾನ್ ಬಿಸ್ಲೇರಿ ಬ್ರ್ಯಾಂಡ್ ಉತ್ತರಾಧಿಕಾರಿ ಆಗಿದ್ದು ಅವರ ಬಗ್ಗೆ 'ಈಟಿವಿ ಭಾರತ' ಬೆಳಕು ಚೆಲ್ಲಿದೆ.
ಜಯಂತಿ ಚೌಹಾನ್ 24ನೇ ವಯಸ್ಸಿನಿಂದ ಬಿಸ್ಲೇರಿಯ ಒಂದು ಭಾಗವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ತಂದೆಯ ಮಾರ್ಗದರ್ಶನದಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಮೊದಲು ಕಂಪನಿಯ ದೆಹಲಿ ಕಚೇರಿಯ ಜವಾಬ್ದಾರಿ ವಹಿಸಿಕೊಂಡರು. ಕಾರ್ಖಾನೆಗಳ ನವೀಕರಣ ಮತ್ತು ವಿವಿಧ ವಿನ್ಯಾಸದ ಯಾಂತ್ರೀಕರಣ ಅಳವಡಿಸುವಲ್ಲಿ ಚೌಹಾನ್ ಪ್ರಮುಖ ಪಾತ್ರ ವಹಿಸಿದ್ದರು.
2011 ರಲ್ಲಿ ಚೌಹಾನ್ ಮುಂಬೈ ಕಚೇರಿ ನೋಡಿಕೊಳ್ಳಲು ಪ್ರಾರಂಭಿಸಿದರು. ಅವರು ಪ್ರಸ್ತುತ ಕಂಪನಿಯ ಹೊಸ ಉತ್ಪನ್ನ ಉತ್ಪಾದಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಹಿಮಾಲಯದಿಂದ ಬಿಸ್ಲೇರಿ ಮಿನರಲ್ ವಾಟರ್, ವೇದಿಕಾ ನ್ಯಾಚುರಲ್ ಮಿನರಲ್ ವಾಟರ್, ಬಿಸ್ಲೇರಿ ಹ್ಯಾಂಡ್ ಪ್ಯೂರಿಫೈಯರ್ ಮತ್ತು ಫಿಜಿ ಫ್ರೂಟ್ ಡ್ರಿಂಕ್ಸ್ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.
ಜಾಗತಿಕ ಬ್ರ್ಯಾಂಡ್ ಮಾಡುವಲ್ಲಿ ಪ್ರಮುಖ ಪಾತ್ರ: 24ನೇ ವಯಸ್ಸಿಗೆ ವೃತ್ತಿ ಜೀವನ ಆರಂಭಿಸಿದ ಜಯಂತಿ ಚೌಹಾನ್ ಅವರಿಗೆ ಈಗ 42 ವರ್ಷ. ಅವರು ಬಿಸ್ಲೇರಿಯ ಮಾರಾಟ ಮತ್ತು ಜಾಹೀರಾತು ತಂಡಗಳನ್ನು ಮುನ್ನಡೆಸುತ್ತಿದ್ದಾರೆ. ಇದಲ್ಲದೇ ಬಿಸ್ಲೇರಿಯ ಜಾಹೀರಾತು ಮತ್ತು ಬ್ರ್ಯಾಂಡಿಂಗ್‌ಗೆ ಸಂಬಂಧಿಸಿದ ಕೆಲಸವನ್ನು ಸಹ ನೋಡಿಕೊಳ್ಳುತ್ತಾರೆ. ಬಿಸ್ಲೇರಿಯನ್ನು ಜಾಗತಿಕವಾಗಿ ಬ್ರಾಂಡ್ ಮಾಡುವಲ್ಲಿ ಜಯಂತಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಫ್ಯಾಷನ್ ಡಿಸೈನಿಂಗ್ ಅಧ್ಯಯನ: ಜಯಂತಿ ಚೌಹಾನ್ USನ ಲಾಸ್ ಏಂಜಲೀಸ್‌ನ ಫ್ಯಾಷನ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಮತ್ತು ಮರ್ಚಂಡೈಸಿಂಗ್‌ನಲ್ಲಿ ಉತ್ಪನ್ನ ಅಭಿವೃದ್ಧಿ ಕುರಿತಾಗಿ ಅಧ್ಯಯನ ಮಾಡಿದರು. ಇಟಲಿಯ ಇನ್‌ಸ್ಟಿಟ್ಯೂಟ್ ಮರಂಗೋನಿ ಮಿಲಾನೊದಲ್ಲಿ ಫ್ಯಾಷನ್ ಸ್ಟೈಲಿಂಗ್ ಅಧ್ಯಯನ ಮಾಡಿದರು. ಛಾಯಾಗ್ರಹಣ ಮತ್ತು ಫ್ಯಾಷನ್ ಶೈಲಿಯನ್ನು ಮುಂದುವರಿಸಲು ಚೌಹಾನ್ ಲಂಡನ್ ಕಾಲೇಜ್ ಆಫ್ ಫ್ಯಾಷನ್‌ಗೆ ಹೋದರು. ಲಂಡನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓರಿಯಂಟಲ್ ಮತ್ತು ಆಫ್ರಿಕನ್ ಸ್ಟಡೀಸ್ (SOAS) ನಿಂದ ಅರೇಬಿಕ್ ಪದವಿ ಪಡೆದಿದ್ದಾರೆ.
ಜಯಂತಿ ಚೌಹಾನ್ ಬಾಲ್ಯಜೀವನ : ಜಯಂತಿ ಚೌಹಾನ್ ತನ್ನ ಬಾಲ್ಯವನ್ನು ದೆಹಲಿ, ಮುಂಬೈ ಮತ್ತು ನ್ಯೂಯಾರ್ಕ್ ನಗರದಲ್ಲಿ ಕಳೆದರು. ಪ್ರವಾಸ ಅಂದರೆ ಇಷ್ಟ. ಅಷ್ಟೇ ಪ್ರಾಣಿ ಪ್ರೇಮಿಯೂ ಹೌದು. ಬಿಸ್ಲೇರಿ ಮಾರಾಟ ಮಾಡುವ ಯಾವುದೇ ಯೋಜನೆ ನಮ್ಮ ಮುಂದೆ ಇಲ್ಲ, ಮಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಮೇಶ್ ಚೌಹಾನ್ ಖಚಿತಪಡಿಸಿದ್ದಾರೆ. ಹಿಂದಿನ ವರ್ಷ ನವೆಂಬರ್‌ನಲ್ಲಿ ಉದ್ಯಮಿ ಜಯಂತಿ ಚೌಹಾನ್ ಕಂಪನಿಯನ್ನು ನಡೆಸಲು ಆಸಕ್ತಿ ಹೊಂದಿಲ್ಲ ಎಂದು ಹೇಳಿ ರಮೇಶ್ ಚೌಹಾನ್ ಅವರು ಖರೀದಿದಾರರನ್ನು ಹುಡುಕುತ್ತಿದ್ದರು ಎಂದು ವರದಿಯಾಗಿತ್ತು.