ಅಯೋಧ್ಯೆ(ಉತ್ತರ ಪ್ರದೇಶ): ಅಯೋಧ್ಯೆಯ ರಾಮ ಜನ್ಮಭೂಮಿ ಪ್ರಕರಣದಲ್ಲಿ ಬಾಬರಿ ಮಸೀದಿ ಪರವಾಗಿ ಕಾನೂನು ಹೋರಾಟ ನಡೆಸಿದ್ದ ಇಕ್ಬಾಲ್ ಅನ್ಸಾರಿ ಅವರಿಗೆ ಜನವರಿ 22ರಂದು ನಡೆಯಲಿರುವ ದೇವರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪದಾಧಿಕಾರಿಗಳು ಅಧಿಕೃತ ಆಮಂತ್ರಣ ಕೊಟ್ಟರು.
ಬಾಬರಿ ಮಸೀದಿ ಪ್ರಕರಣದಲ್ಲಿ ಇಕ್ಬಾಲ್ ಅನ್ಸಾರಿ ತಂದೆ ಹಶ್ಮಿ ಅನ್ಸಾರಿ ಫಿರ್ಯಾದಿಯಾಗಿದ್ದರು. ಬಳಿಕ ಇಕ್ಬಾಲ್ ಸಹ ಪ್ರಕರಣವನ್ನು ಪ್ರತಿಪಾದಿಸುತ್ತಿದ್ದರು. ಸುಮಾರು ಏಳು ದಶಕಗಳ ಕಾಲ ಕೆಳ ಹಂತದ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್ವರೆಗೂ ಅನ್ಸಾರಿ ಅರ್ಜಿದಾರರಾಗಿದ್ದರು. ಅಂತಿಮವಾಗಿ 2019ರಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯವು ರಾಮ ಮಂದಿರ ಪರವಾಗಿ ತೀರ್ಪು ಪ್ರಕಟಿಸಿತ್ತು. ಆಗ ಈ ಆದೇಶವನ್ನು ಸ್ವಾಗತಿಸಿದ್ದ ಅನ್ಸಾರಿ ನಂತರ ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ.
ಆಹ್ವಾನ ಸಿಕ್ಕಿರುವುದು ನನ್ನ ಅದೃಷ್ಟ-ಇಕ್ಬಾಲ್ ಅನ್ಸಾರಿ: ಶುಕ್ರವಾರ ಮಧ್ಯಾಹ್ನ ಇಕ್ಬಾಲ್ ಅನ್ಸಾರಿ ಅವರ ಮನೆಗೆ ತೆರಳಿದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪದಾಧಿಕಾರಿಗಳು, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು. ಈ ಆಮಂತ್ರಣ ಸ್ವೀಕರಿಸಿದ ಅವರು, ''ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಮಹೋತ್ಸವಕ್ಕೆ ಖಂಡಿತವಾಗಿಯೂ ಭಾಗವಹಿಸುವೆ. ಈ ಆಹ್ವಾನ ದೊರೆತಿರುವುದು ನನ್ನ ಅದೃಷ್ಟ'' ಎಂದು ತಮ್ಮ ಸಂತಸ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ''ರಾಮ ಮಂದಿರ ನಿರ್ಮಾಣವಾಗುವುದಷ್ಟೇ ಅಲ್ಲ, ಅಯೋಧ್ಯೆಯ ಅಭಿವೃದ್ಧಿಯೂ ಆಗುತ್ತಿದೆ. ಅಯೋಧ್ಯೆಯ ಸರ್ವತೋಮುಖ ಅಭಿವೃದ್ಧಿ ಕಾಣುತ್ತಿದೆ. ನಗರದಲ್ಲಿ ವಿಮಾನ ನಿಲ್ದಾಣ, ಹೊಸ ರೈಲು ನಿಲ್ದಾಣ ಸಿದ್ಧವಾಗಿದೆ. ಅನೇಕ ರೈಲುಗಳು ದೇಶದ ಇತರ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಪ್ರಾರಂಭಿಸಿವೆ. ಅಯೋಧ್ಯೆಯ ಎಲ್ಲ ರಸ್ತೆಗಳನ್ನು ಅಗಲೀಕರಣ ಮಾಡಲಾಗಿದೆ. ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತಿವೆ'' ಎಂದು ಹೇಳಿದರು.
2020ರ ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅಡಿಪಾಯ ಹಾಕಿದ ಸಮಯದಲ್ಲೂ ಇಕ್ಬಾಲ್ ಅನ್ಸಾರಿ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಇತ್ತೀಚೆಗೆ ವಿಮಾನ ನಿಲ್ದಾಣ, ರೈಲು ನಿಲ್ದಾಣ ಉದ್ಘಾಟನೆ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನಿಟ್ಟಿನಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ್ದರು. ಆ ಸಂದರ್ಭದಲ್ಲಿ ಜನರ ಮಧ್ಯೆ ನಿಂತಿದ್ದ ಅನ್ಸಾರಿ, ಮೋದಿ ಅವರತ್ತ ಹೂಮಳೆ ಸುರಿಸಿ ಗಮನ ಸೆಳೆದಿದ್ದರು.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಮೋದಿ ಮೇಲೆ ಹೂ ಸುರಿಸಿದ ಬಾಬರಿ ಮಸೀದಿ ಹೋರಾಟಗಾರ ಇಕ್ಬಾಲ್ ಅನ್ಸಾರಿ