ನವದೆಹಲಿ: ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದ (ಇಡಿ) ನಿರ್ದೇಶಕರ ಅವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸುವ ಎರಡು ಮಸೂದೆಗಳನ್ನು ರಾಜ್ಯಸಭೆ ಅಂಗೀಕರಿಸಿದೆ. ಡಿಸೆಂಬರ್ 3 ರಂದು ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿತ್ತು. ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.
ಸಿಬಿಐ ನಿರ್ದೇಶಕರ ಅಧಿಕಾರವಧಿ ವಿಸ್ತರಿಸಲು ದೆಹಲಿ ವಿಶೇಷ ಪೊಲೀಸ್ ವ್ಯವಸ್ಥೆ (ತಿದ್ದುಪಡಿ) ಸುಗ್ರೀವಾಜ್ಞೆ - 2021 ಮತ್ತು ಇ.ಡಿ ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಲು ಕೇಂದ್ರೀಯ ಜಾಗೃತ ಆಯೋಗ (ತಿದ್ದುಪಡಿ) ಸುಗ್ರೀವಾಜ್ಞೆ - 2021 ಅನ್ನು ಕೇಂದ್ರ ಸರ್ಕಾರವು ಈ ಹಿಂದೆ ಹೊರಡಿಸಿತ್ತು. ಅದಕ್ಕೆ ರಾಷ್ಟ್ರಪತಿ ಅವರು ಸಹಿ ಹಾಕಿದ್ದರು.
ಇದನ್ನೂ ಓದಿ: ಭಾರತದ ಅಂತಾರಾಷ್ಟ್ರೀಯ ಬ್ರ್ಯಾಂಡಿಂಗ್ ಹೆಚ್ಚಾಗಿದೆ : ಸಚಿವ ಜೈಶಂಕರ್
ತನಿಖೆಯ ವೇಗವನ್ನು ಕಾಯ್ದುಕೊಳ್ಳಲು ಈ ಮಸೂದೆ ಉಪಯುಕ್ತವಾಗಲಿದೆ ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಕಪ್ಪುಹಣ, ಭ್ರಷ್ಟಾಚಾರ ಮತ್ತು ಮಾದಕವಸ್ತು ಕಳ್ಳಸಾಗಣೆ, ಭಯೋತ್ಪಾದನೆಯಂತಹ ಅಪರಾಧಗಳೊಂದಿಗೆ ಸಂಬಂಧ ಹೊಂದಿರುವ ಅಂತಾರಾಷ್ಟ್ರೀಯ ಅಪರಾಧಗಳ ಬೆದರಿಕೆಯನ್ನು ಭಾರತ ಎದುರಿಸುತ್ತಿದೆ ಎಂದು ಹೇಳಿದ ಅವರು, ಇವುಗಳು ಭಾರತದ ಭದ್ರತೆ ಮತ್ತು ಆರ್ಥಿಕ ರಚನೆಗೆ ಅಪಾಯವನ್ನುಂಟುಮಾಡುತ್ತವೆ ಎಂದರು.
ಆರ್ಥಿಕ ಅಪರಾಧ ತನಿಖೆ ಮತ್ತು ಅಂತಾರಾಷ್ಟ್ರೀಯ ಅಪರಾಧಕ್ಕಾಗಿ ಸಂಪನ್ಮೂಲಗಳನ್ನು ಸುಧಾರಿಸಲು ಈ ತಿದ್ದುಪಡಿಗಳನ್ನು ತರಲಾಗಿದೆ ಎಂದು ಸಿಂಗ್ ವಿವರಿಸಿದರು. ಇನ್ನು 12 ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ವಿಪಕ್ಷ ಸದಸ್ಯರು ಸಿಂಗ್ ಭಾಷಣಕ್ಕೆ ಈ ವೇಳೆ ಅಡ್ಡಿಪಡಿಸಿದರು.