ನವದೆಹಲಿ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರದಿಂದ ವಿಯೆಟ್ನಾಂ ಪ್ರವಾಸ ಕೈಗೊಂಡಿದ್ದಾರೆ. ಇದರೊಂದಿಗೆ ಬ್ರಹ್ಮೋಸ್ ಕ್ಷಿಪಣಿ ಪೂರೈಕೆ ವ್ಯವಹಾರದ ಒಪ್ಪಂದ ಮಾಡುವ ಬಗ್ಗೆ ಭಾರತ ಉತ್ಸುಕತೆಯಿಂದ ಎದುರು ನೋಡುತ್ತಿದೆ.
ಕಳೆದ ಜನವರಿಯಲ್ಲಿ ಫಿಲಿಪೈನ್ಸ್ಗೆ ಕನಿಷ್ಠ ಮೂರು ಬ್ರಹ್ಮೋಸ್ ಕ್ಷಿಪಣಿ ಬ್ಯಾಟರಿಗಳನ್ನು ರಫ್ತು ಸಂಬಂಧ ಭಾರತ 2,770 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿಕೊಂಡಿತ್ತು. ಇದರ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರದಿಂದ ವಿಯೆಟ್ನಾಂಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಇತ್ತೀಚೆಗೆ ಭಾರತದ ಕ್ಷಿಪಣಿಗಳ ಬಗ್ಗೆ ವಿಯೆಟ್ನಾಂ ಆಸಕ್ತಿ ವ್ಯಕ್ತಪಡಿಸಿದೆ. ಅಲ್ಲದೇ, ಬ್ರಹ್ಮೋಸ್ ಜೊತೆಗೆ ಆಕಾಶ್ ಕ್ಷಿಪಣಿ ಬಗ್ಗೆಯೂ ವಿಯೆಟ್ನಾಂ ಆಸಕ್ತಿ ತೋರುತ್ತಿದೆ. ಮೇಲಾಗಿ ವಿಯೆಟ್ನಾಂ ನಮ್ಮ ಸಕಾರಾತ್ಮಕ ರಾಷ್ಟ್ರಗಳ ಪಟ್ಟಿಯಲ್ಲಿದೆ. ಆದ್ದರಿಂದ ನಮ್ಮ ಉತ್ಪನ್ನಗಳ ಬಗ್ಗೆ ಬಲವಾಗಿ ಮಾತನಾಡುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ರಹ್ಮೋಸ್ ಹಿನ್ನೆಲೆ : ಭಾರತವು ರಷ್ಯಾದೊಂದಿಗೆ ಸೇರಿಕೊಂಡು ಸೂಪರ್ಸಾನಿಕ್ ಬ್ರಹ್ಮೋಸ್ ಕ್ಷಿಪಣಿ ಅಭಿವೃದ್ಧಿಪಡಿಸುತ್ತಿದೆ. ಆಕಾಶ್ ಕ್ಷಿಪಣಿ ಸುಮಾರು 90 ಪ್ರತಿಶತದಷ್ಟು ಭಾರತದ ಉತ್ಪನ್ನವೇ ಆಗಿದೆ. ಅದರಲ್ಲೂ, ಬ್ರಹ್ಮೋಸ್ ಎಂಬ ಪದವು ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮೋಸ್ಕ್ವಾ ನದಿಯ ಹೆಸರಿಂದ ಬಂದಿದೆ.
ಈ ಕ್ಷಿಪಣಿಯನ್ನು 1998ರಿಂದ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ರಷ್ಯಾದ ಸರ್ಕಾರಿ ಸ್ವಾಮ್ಯದ ಎನ್ಒಪಿ ಮಶಿನೋಸ್ಟ್ರೋಯೆನಿಯಾ ಜಂಟಿಯಾಗಿ ಉತ್ಪಾದಿಸಲಾಗುತ್ತದೆ. ಎಲ್ಲ ಬ್ರಹ್ಮೋಸ್ ಕ್ಷಿಪಣಿಗಳನ್ನು ಭಾರತದಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ತಯಾರಿಸುತ್ತದೆ. ಇದರಲ್ಲಿ ಭಾರತವು ಶೇ.50.5ರಷ್ಟು ಪಾಲನ್ನು ಹೊಂದಿದ್ದರೆ, ರಷ್ಯಾವು ಶೇ.49.5ರಷ್ಟು ಪಾಲನ್ನು ಹೊಂದಿದೆ.
ಭಾರತದ ಗುರಿಯೇನು? : 2016ರಿಂದ ಭಾರತ-ವಿಯೆಟ್ನಾಂ 'ಸಮಗ್ರ ಕಾರ್ಯತಂತ್ರ'ದ ಪಾಲುದಾರಿಕೆ ರಾಷ್ಟ್ರಗಳಾಗಿವೆ. ಹೀಗಾಗಿ, ವಿಯೆಟ್ನಾಂಗೆ ಕ್ಷಿಪಣಿ ಮಾರಾಟದಂತಹ ಒಪ್ಪಂದ ಭಾರತದ ಕಾರ್ಯತಂತ್ರದ ಪ್ರಭಾವದ ನೀತಿ ಎತ್ತಿ ತೋರಿದಂತೆ ಆಗುತ್ತದೆ. ಜೊತೆಗೆ ಮೇಕ್ ಇನ್ ಇಂಡಿಯಾದಿಂದ ಮೇಕ್ ಫಾರ್ ದಿ ವರ್ಲ್ಡ್ ಕಡೆಗೆ ಮುನ್ನಡೆದಂತೆ ಆಗಲಿದೆ ಎಂದು ಹೆಸರು ಹೇಳಲು ಇಚ್ಛಿಸಿದ ಅಧಿಕಾರಿ ವಿವರಿಸಿದ್ದಾರೆ.
ವಿಯೆಟ್ನಾಂ ಮತ್ತು ಭಾರತ ಎರಡು ಪರಸ್ಪರ ಬೇಕಾದ ರಾಷ್ಟ್ರಗಳಾಗಿದೆ. ಭಾರತದ 'ಆ್ಯಕ್ಟ್ ಈಸ್ಟ್ ಪಾಲಿಸಿ' (AEP)ಯೊಂದಿಗೆ ಆಗ್ನೇಯ ಏಷ್ಯಾದ ರಾಷ್ಟ್ರಗಳ ಒಕ್ಕೂಟದಡಿ (ASEAN) ಆಗ್ನೇಯ ಏಷ್ಯಾದ ರಾಷ್ಟ್ರಗಳೊಂದಿಗೆ ನಿಕಟ ಆರ್ಥಿಕ, ರಾಜಕೀಯ, ಸೇನಾ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ನಿರ್ಮಿಸುವ ಭಾರತ ಹೊಂದಿದೆ.
ಅಲ್ಲದೇ, ಭಾರತೀಯ ಉತ್ಪನ್ನಗಳೊಂದಿಗೆ ಆಗ್ನೇಯ ಏಷ್ಯಾದ ಮಾರುಕಟ್ಟೆ ವಿಸ್ತರಣೆಯ ಗುರಿ ಭಾರತಕ್ಕಿದೆ. ಇತ್ತ, ಆ್ಯಕ್ಟ್ ಈಸ್ಟ್ ಪಾಲಿಸಿಯು ಪಾಶ್ಚಾತ್ಯ ರಾಷ್ಟ್ರಗಳು ಮತ್ತು ವಿಶೇಷವಾಗಿ ಯುರೋಪ್ ಮತ್ತು ಅಮೆರಿಕ ಕಡೆಗೆ ನೋಡುವುದನ್ನು ಬದಲಾಯಿಸುವುದೇ ಆಗಿದೆ.
ಭಾರತ-ವಿಯೆಟ್ನಾಂ ರಾಜತಾಂತ್ರಿಕಗೆ 50 ವರ್ಷ : ಭಾರತ-ವಿಯೆಟ್ನಾಂ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯಾಗಿ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಈ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ವಿಯೆಟ್ನಾಂ ರಕ್ಷಣಾ ಸಚಿವ ಜನರಲ್ ಫಾನ್ ವ್ಯಾನ್ ಗಿಯಾಂಗ್ ಅವರನ್ನು ಭೇಟಿ ಮಾಡಲಿದ್ದಾರೆ.
ಜೊತೆಗೆ ಅಧ್ಯಕ್ಷ ನ್ಗುಯೆನ್ ಕ್ಸುವಾನ್ ಫುಕ್ ಹಾಗೂ ಪ್ರಧಾನಿ ಫಾಮ್ ಮಿನ್ ಚಿನ್ಹ್ ಅವರನ್ನೂ ರಾಜನಾಥ್ ಭೇಟಿ ಮಾಡಲಿದ್ದಾರೆ. ಇದೇ ವೇಳೆ ಡಿಫೆನ್ಸ್ ಲೈನ್ ಆಫ್ ಕ್ರೆಡಿಟ್ ಅಡಿಯಲ್ಲಿ 100 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾದ 12 ಹೈಸ್ಪೀಡ್ ಗಾರ್ಡ್ ಬೋಟ್‌ಗಳನ್ನು ವಿಯೆಟ್ನಾಂಗೆ ರಾಜನಾಥ್ ಹಸ್ತಾಂತರಿಸಲಿದ್ದಾರೆ.
ಇದನ್ನೂ ಓದಿ: ವಿವಾದಿತ ಹೇಳಿಕೆ: ಬಿಜೆಪಿಯಿಂದ ನೂಪುರ್ ಶರ್ಮಾ, ನವೀನ್ ಜಿಂದಾಲ್ ಅಮಾನತು