ನವದೆಹಲಿ : ಕೋವಿಡ್ ವಿರುದ್ಧ ಹೋರಾಡಲು ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಕೊರೊನಾ ಸೋಂಕು ನಿರೋಧಕವಾಗಿ ಕೆಲಸ ಮಾಡಬಲ್ಲ ಡಿಆಕ್ಸಿ-ಡಿ-ಗ್ಲೂಕೋಸ್ (2-DG) ಔಷಧದ ಮೊದಲ ಡೋಸ್‌ನ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಡುಗಡೆಗೊಳಿಸಿದರು. 10 ಸಾವಿರ ಡೋಸ್ಗಳನ್ನು ಇದೇ ವೇಳೆ ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ಹಸ್ತಾಂತರಿಸಲಾಯಿತು.
ಇದೇ ವೇಳೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಮ್ಮ ದೇಶಕ್ಕೆ ಅಗತ್ಯವಿರುವಾಗ, ಡಿಆರ್‌ಡಿಒ ಯಾವಾಗಲೂ ಬೆಂಬಲಿಸುತ್ತದೆ. ಡಿಆರ್‌ಡಿಒ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ಅವರನ್ನು ನಾನು ಅಭಿನಂದಿಸುತ್ತೇನೆ ಮತ್ತು ಈ ಔಷಧಿಯನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ವಿಜ್ಞಾನಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಕೋವಿಡ್ ಎರಡನೇ ಅಲೆ ಬಂದ ನಂತರ ನಾವು ಸಂಕಷ್ಟದಲ್ಲಿದ್ದೇವೆ. ಕಳೆದೊಂದು ವರ್ಷದಿಂದ ಕೊರೊನಾದಿಂದ ಹೈರಣಾಗಿದ್ದೇವೆ. ಆದರೂ ನಮ್ಮ ಹೋರಾಟ ಮುಂದುವರಿಯಲಿದೆ. ಕೋವಿಡ್ ವಿರುದ್ಧ ಹೋರಾಡಿ ಗೆದ್ದು ಬರುತ್ತೇವೆ.
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಆಮ್ಲಜನಕ ಉತ್ಪಾದನೆಗೆ ಸಾಮೂಹಿಕ ಪ್ರಯತ್ನ ಮಾಡುವ ಮೂಲಕ, ಸಮಸ್ಯೆಯನ್ನು ಬಗೆಹರಿಸಲಾಗುವುದು. ಈಗ ಔಷಧಿಯ ಕೊರತೆ ಕೂಡ ಅಷ್ಟೊಂದು ಇಲ್ಲ ಎಂದು ಹೇಳಿದರು.
ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಡಿಆಕ್ಸಿ-ಡಿ-ಗ್ಲೂಕೋಸ್ ಔಷಧಿ ಕೋವಿಡ್ ವಿರುದ್ಧ ಹೋರಾಡಲು ತುಂಬಾ ಸಹಾಯಕವಾಗಿದೆ. ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಚಿಕಿತ್ಸೆಗೆ ಮತ್ತು ರೋಗಿಗಳು ಹೆಚ್ಚು ಆಕ್ಸಿಜನ್ ಮೇಲೆ ಅವಲಂಬಿತರಾಗುವುದನ್ನು ಈ ಔಷಧಿ ತಪ್ಪಿಸಲೂಬಹುದು. ಪಿಎಂ-ಕೇರ್ಸ್ ಫಂಡ್ ಅಡಿ 322.5 ಕೋಟಿ ರೂಪಾಯಿ ವೆಚ್ಚದಲ್ಲಿ 1.5 ಲಕ್ಷ ಘಟಕಗಳನ್ನು ಸಂಗ್ರಹಿಸಲಾಗುತ್ತದೆ ಎಂದರು.
ಇದನ್ನೂ ಓದಿ: ಕೊರೊನಾ ತಡೆಗೆ ಮತ್ತೊಂದು ಔಷಧ: ಇಂದು ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 2ಡಿಜಿ ಬಿಡುಗಡೆ
ಔಷಧವು ನಮ್ಮ ದೇಶದಲ್ಲಿ ಭರವಸೆಯ ಕಿರಣದೊಂದಿಗೆ ಬಂದಿದೆ. ಇದು ವೈಜ್ಞಾನಿಕ ಪ್ರಗತಿಗೆ ಉತ್ತಮ ಉದಾಹರಣೆಯಾಗಿದೆ. ನಮ್ಮ ದೇಶದ ವಿಜ್ಞಾನಿಗಳು ನಮ್ಮ ದೇಶವನ್ನು ಸಮೀಪಿಸುತ್ತಿರುವ ಯಾವುದೇ ತೀವ್ರ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆಂದು ನಾನು ನಂಬುತ್ತೇನೆ ಎಂದು ಹೇಳಿದರು.
ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರು ಆಂಟಿ-ಕೋವಿಡ್ ಡ್ರಗ್ 2 ಡಿಜಿಯನ್ನು ದೆಹಲಿ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರಿಗೆ ಹಸ್ತಾಂತರಿಸಿದರು. ಇದೇ ವೇಳೆ ಮಾತನಾಡಿದ ಅವರು, ಇದು ಕೋವಿಡ್ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದರು.