ಜೈಪುರ(ರಾಜಸ್ಥಾನ): ಇತ್ತೀಚಿನ ದಿನಗಳಲ್ಲಿ ಮದುವೆ ಅಂದ್ರೆ ಅಲ್ಲಿ ಅದ್ಧೂರಿ ಅಲಂಕಾರ, ಡಿಜೆ ಸದ್ದು, ದೊಡ್ಡ ಮಂಟಪ ಇರಲೇಬೇಕು. ಇದು ಭಾರಿ ವೆಚ್ಚಕ್ಕೆ ಕಾರಣವಾಗಿ ಕುಟುಂಬಗಳು ಸಾಲದ ಸುಳಿಗೆ ಸಿಲುಕುವಂತೆಯೂ ಮಾಡುತ್ತದೆ. ಇದನ್ನು ತಪ್ಪಿಸಲು ರಾಜಸ್ಥಾನದಲ್ಲಿ ಎರಡು ಸಮುದಾಯವರು ಅದ್ಧೂರಿ ಮದುವೆಗೆ ಬ್ರೇಕ್ ಹಾಕಿ, ಸಿಂಪಲ್ ಮದುವೆಗೆ ಜೈ ಎಂದಿದ್ದಾರೆ. ಕುಮಾವತ್ ಮತ್ತು ಜಾಟ್ ಸಮುದಾಯಗಳು ಈ ನಿರ್ಧಾರಕ್ಕೆ ಬಂದಿವೆ.
ಅದ್ಧೂರಿ ಅಲಂಕಾರ, ಡಿಜೆ ಸದ್ದು ಮತ್ತು ಪಟಾಕಿ ಇಲ್ಲದೇ ಮದುವೆಗಳನ್ನು ಆಚರಿಸುವ ಕುರಿತು ನಿರ್ಣಯ ತೆಗೆದುಕೊಂಡಿದ್ದಾರೆ. ವಧು-ವರರಿಗೆ ನೀಡುವ ಆಭರಣ, ನಗದು, ಬಟ್ಟೆ ಮುಂತಾದ ಉಡುಗೊರೆಗಳ ಮೇಲೂ ನಿರ್ಬಂಧ ಹೇರಿದ್ದಾರೆ. ಇನ್ನೂ ವಿಶೇಷ ಅಂದ್ರೆ ವರನ ಜೊತೆಗೆ ಮದುವೆಗೆ ಬರುವವರು ಸಹ 'ಗಡ್ಡ' ಬಿಡಬಾರದು ಎಂಬ ಷರತ್ತು ಹಾಕಿದ್ದಾರೆ.
ಮದುವೆ ಒಂದು ದೈವಿಕ ಕಾರ್ಯ: ಈ ಬಗ್ಗೆ ಕುಮಾವತ್ ಸಮುದಾಯದ ಮುಖಂಡ ಲಕ್ಷ್ಮೀ ನಾರಾಯಣ ತಿಲಕ್ ಮಾತನಾಡಿ, ವಿವಾಹ ಮಹೋತ್ಸವವನ್ನು ದೈವಿಕ ಕಾರ್ಯವೆಂದು ಪರಿಗಣಿಸಿ ವರನನ್ನು ರಾಜನನ್ನಾಗಿ ಕಾಣುವ ಪದ್ಧತಿ ಇದೆ. ಹೀಗಾಗಿ ವಿವಾಹದ ವೇಳೆ ವರನಿಗೆ ಗಡ್ಡವಿರಬಾರದು. ವರನು ಗಡ್ಡಧಾರಿಯಾಗಿ ಬರಬಾರದು. ಅಲಂಕಾರ, ಸಂಗೀತ ಮತ್ತಿತರ ವಸ್ತುಗಳಿಗಾಗಿ ಮಾಡುವ ದುಂದು ವೆಚ್ಚವನ್ನು ನಿರ್ಬಂಧಿಸಲಾಗಿದೆ ಎಂದರು.
ಸಮಾನತೆ ತರುವ ಕ್ರಮ: ಅದೇ ರೀತಿಯಾಗಿ ಪಾಲಿಯ ರೋಹೆಟ್ ಉಪವಿಭಾಗದ 5 ಗ್ರಾಮಗಳ ಜಾಟ್ ಸಮುದಾಯದ ಮುಖಂಡರು, ವಿವಾಹ ಸಮಾರಂಭಗಳು ದುಂದು ವೆಚ್ಚಕ್ಕೆ ಕಾರಣವಾಗದಂತೆ ನಿಯಮಗಳನ್ನು ರೂಪಿಸಿದ್ದಾರೆ. ಮದುವೆ ಬಳಿಕ ಮೆರವಣಿಗೆ ನಡೆಸುವುದುನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಅಲ್ಲದೇ, ಸಮುದಾಯದ ಎಲ್ಲಾ ಕುಟುಂಬಗಳ ವಿವಾಹಗಳಲ್ಲಿ ಸಮಾನತೆ, ಏಕರೂಪತೆ ತರುವ ನಿಟ್ಟಿನಲ್ಲಿ ಈ ನಿಯಮಗಳನ್ನು ಹೇರಲಾಗಿದೆ ಎಂಬುದು ಮುಖಂಡರ ಮಾತಾಗಿದೆ.
ಸಮಾಜದಲ್ಲಿ ಸಮಾನತೆ ಹಾಗೂ ಮದುವೆ ಸಮಾರಂಭಗಳಲ್ಲಿ ಏಕರೂಪತೆ ತರುವ ಉದ್ದೇಶದಿಂದ ಈ ನಿಯಮಗಳನ್ನು ರೂಪಿಸಿದ್ದೇವೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆ ಗ್ರಾಮದ ಸರಪಂಚ್ ಎಚ್ಚರಿಸಿದ್ದಾರೆ.
ಓದಿ: ಘೋರ ವಾಮಾಚಾರ.. ಮಹಿಳೆಯ ಖಾಸಗಿ ಅಂಗಕ್ಕೆ ಕೈಹಾಕಿ ಕರುಳು ಹೊರಗೆಳೆದು ಕೊಂದ್ರು ಅಕ್ಕ-ಬಾವ!